ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಟಿಬೇಟಿಯನ್ ಕಾಲೋನಿಯತ್ತ ಜಿಲ್ಲಾಡಳಿತ ಕಣ್ಣು ನೆಟ್ಟಿದೆ.
ಕೋವಿಡ್ -19 ಸೋಂಕು ಮುಂಜಾಗೃತಾ ಕ್ರಮವಾಗಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಟಿಬೇಟಿಯನ್ ಕಾಲೋನಿ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ.
ಮುಂಡಗೋಡ ತಹಶೀಲ್ದಾರ ಅವರ ಪರವಾನಿಗೆ ಇಲ್ಲದೇ ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಬೌದ್ಧ ಬಿಕ್ಷುಗಳು ಹಾಗೂ ಇನ್ನಿತರೆ ವ್ಯಕ್ತಿಗಳ ಆಗಮನ ಹಾಗೂ ನಿರ್ಗಮನವನ್ನು ನಿಷೇಧಿಸಿದ್ದಾರೆ. ದೀರ್ಘಾವಧಿಯಿಂದ ಅನ್ಯ ಕಾರಣಕ್ಕಾಗಿ ಹೊರಗುಳಿದ ಬೌದ್ಧ ಬಿಕ್ಷುಗಳು ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಹಿಂದಿರುಗಿದಲ್ಲಿ ಕಡ್ಡಾಯವಾಗಿ ಸ್ವಯಂ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರತಕ್ಕದ್ದು. ಇದನ್ನು ಅಲ್ಲಿಯ ಟಿಬೇಟಿಯನ್ ಕೇಂದ್ರದ ಆಡಳಿತಾಧಿಕಾರಿಗಳು ಖಚಿತಪಡಿಸತಕ್ಕದ್ದು. ಅಲ್ಲದೇ ಇದನ್ನು ತಾಲೂಕಾ ವೈದ್ಯಾಧಿಕಾರಿಗಳು ಮೇಲುಸ್ತುವಾರಿ ಮಾಡತಕ್ಕದ್ದು ಎಂದು ಸೂಚಿಸಿದ್ದಾರೆ.
ಈಗಾಗಲೇ ಮುಂಡಗೋಡದ ಟಿಬೇಟಿಯನ್ ಕಾಲೋನಿಗೆ ಹೊರಗಿನ ಪ್ರದೇಶಗಳಿಂದ ಬಂದಂತಹ ಬೌದ್ಧ ಬಿಕ್ಷುಗಳು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡತಕ್ಕದ್ದು ಹಾಗೂ ಕಾಲೋನಿಯಲ್ಲಿ ಐದಕ್ಕಿಂತ ಹೆಚ್ಚಿನ ಜನರು ಗುಂಪಾಗಿ ಒಂದು ಕಡೆ ಸೇರುವಂತಿಲ್ಲ. ಈ ಕಾಲೋನಿಯಿಂದ ಹೋರಹೋಗಲು ಇಚ್ಚಿಸಿದ ವ್ಯಕ್ತಿಗಳು ಮುಂದಿನ ಒಂದು ತಿಂಗಳ ಕಾಲ ಅಲ್ಲಿನ ತಹಶೀಲ್ದಾರರ ಅನುಮತಿ ಇಲ್ಲದೇ ಪುನಃ ಕಾಲೋನಿ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.