ಪುಣೆ: ಟಾಸ್ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಟಾಸ್ ಸೋತ ಬಗ್ಗೆ ಒಂದು ಮಾತು ಹೇಳಿದ್ದರು. ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾವು ಟಾಸ್ ಸೋತಿದ್ದೆವು. ಆದರೆ ಪಂದ್ಯ ಗೆದ್ದಿದ್ದೆವು. ಅದೇ ರೀತಿ ಇಲ್ಲಿಯೂ ಮಾಡುತ್ತೇವೆ ಎಂದು.
ಆದರೆ ಅದು ಇಂಗ್ಲೆಂಡ್ ವಿರುದ್ಧ ಸಾಧಿಸಲು ಸಾಧ್ಯವಾಗಿರಬಹುದು. ಆದರೆ ಆಸ್ಟ್ರೇಲಿಯಾ ವಿರುದ್ದ ಅಷ್ಟು ಸುಲಭವಲ್ಲ ಎಂದು ಪ್ರಥಮ ಟೆಸ್ಟ್ ನ ಮೊದಲ ಅವಧಿಯಲ್ಲೇ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ತೋರಿಸಿಕೊಟ್ಟರು.
ಇದೊಂದು ಟರ್ನಿಂಗ್ ವಿಕೆಟ್, ಭಾರತೀಯ ಸ್ಪಿನ್ನರ್ ಗಳ ದಾಳಿಗೆ ಆಸ್ಟ್ರೇಲಿಯನ್ನರು ಮೊದಲ ಅವಧಿಯಲ್ಲೇ ಮೂರರರಿಂದ ನಾಲ್ಕು ವಿಕೆಟ್ ಕೈಚೆಲ್ಲುತ್ತಾರೆ ಎಂದು ನಂಬಲಾಗಿತ್ತು. ಆದರೆ ಅದೆಲ್ಲಾ ಸುಳ್ಳಾಯಿತು. ಆರಂಭಿಕರು ಉತ್ತಮವಾಗಿ ಆಡಿದರು. ಅಭ್ಯಾಸ ಪಂದ್ಯವನ್ನು ತಾವು ಎಷ್ಟು ಸದುಪಯೋಗ ಪಡಿಸಿದ್ದೆವು, ಈ ಸರಣಿಗೆ ಎಷ್ಟು ಹೋಂ ವರ್ಕ್ ಮಾಡಿದ್ದೆವು ಎಂಬುದನ್ನು ಮೊದಲ ಅವಧಿಯಲ್ಲೇ ತೋರಿಸಿಕೊಟ್ಟರು.
ತಾವು ಇಂಗ್ಲೆಂಡ್ ನಂತೆ ಸುಲಭದ ತುತ್ತಲ್ಲ ಎಂದು ತೋರಿಸಿಕೊಟ್ಟರು. ಇದು ತಿರುವಿನ ಪಿಚ್ ಆಗಿರಬಹುದು. ಆದರೆ ಮೊದಲು ಬ್ಯಾಟಿಂಗ್ ಮಾಡುವವರು ಎಚ್ಚರಿಕೆಯಿಂದ ಆಡಿ 300 ರ ಗಡಿ ದಾಟಿದರೂ ಸಾಕು. ಸ್ಕೋರ್ ನಿರ್ಣಾಯಕವಾಗುತ್ತದೆ. ಭಾರತದ ಸ್ಪಿನ್ನರ್ ಗಳ ಚಳಕ ದ್ವಿತೀಯ ಅವಧಿಯಲ್ಲಿ ಕಾಣಿಸಬಹುದು. ಪಿಚ್ ಕೊಂಚ ಹಳತಾದಂತೆ ಅಶ್ವಿನ್-ಜಡೇಜಾ ಜೋಡಿ ಮ್ಯಾಜಿಕ್ ಮಾಡಬಹುದು.
ಇದರ ನಡುವೆ ಆಸೀಸ್ ಗೆ ಆಘಾತ ತಂದಿದ್ದು ಎಂ. ರೆನ್ ಶೋ. ಉತ್ತಮವಾಗಿ ಆಡುತ್ತಿದ್ದ ಆರಂಭಿಕ ರೆನ್ ಶೋ ಗಾಯಾಳುವಾಗಿ ಪೆವಿಲಿಯನ್ ಗೆ ಮರಳಬೇಕಾಯಿತು. ವಾರ್ನರ್ ಔಟಾದ ಬೆನ್ನಲ್ಲೇ ರೆನ್ ಶೋ ಕೂಡಾ ಮರಳಿದ್ದು ಆಸ್ಟ್ರೇಲಿಯಾಕ್ಕೆ ಆಘಾತ ತಂದಿಕ್ಕಿತು. ಹೀಗಾಗಿ ಆಸೀಸ್ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದರೂ, ಇಬ್ಬರು ಪೆವಿಲಿಯನ್ ಗೆ ಮರಳುವಂತಾಯಿತು.
ಆದರೂ ಉಮೇಶ್ ಯಾದವ್ ಡೇವಿಡ್ ವಾರ್ನರ್ ವಿಕೆಟ್ ಉಡಾಯಿಸಿದ ರೀತಿ ಭಾರತೀಯ ಬೌಲರ್ ಗಳ ಆತ್ಮ ವಿಶ್ವಾಸ ಹೆಚ್ಚಿಸಬಹುದು. ಅಂತೂ ಊಟದ ವಿರಾಮದ ವೇಳೆಗೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ. ಶಾನ್ ಮಾರ್ಷ್1 ರನ್ ಮತ್ತು ಸ್ಟೀವ್ ಸ್ಮಿತ್ 1 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ