ಸಿಡ್ನಿ: ಕೊನೆಯ ಟೆಸ್ಟ್ ಪಂದ್ಯವಾಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಕಳೆದುಹೋಗಿದ್ದ ಗ್ರೀನ್ ಬ್ಯಾಗೀ ಕ್ಯಾಪ್ ಈಗ ಮರಳಿ ಅವರ ಕೈಸೇರಿದೆ.
ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯ ವಾರ್ನರ್ ಪಾಲಿಗೆ ವಿದಾಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಭಾಗಿಯಾಗಲು ಸಿಡ್ನಿಗೆ ಪ್ರಯಾಣ ಮಾಡುವಾಗ ವಾರ್ನರ್ ಗ್ರೀನ್ ಕ್ಯಾಪ್ ಕಳೆದುಕೊಂಡಿದ್ದರು.
ನನ್ನ ಗ್ರೀನ್ ಬ್ಯಾಗೀ ಕ್ಯಾಪ್ ಕಳೆದುಹೋಗಿದೆ. ಎಲ್ಲಿ ಹುಡುಕಿದರೂ ಸಿಕ್ಕಿಲ್ಲ. ದಯವಿಟ್ಟು ಯಾರಾದರೂ ತೆಗೆದುಕೊಂಡಿದ್ದರೆ ನನಗೆ ಮರಳಿಸಿ. ನಿಮಗೆ ಬೇರೆ ಕ್ಯಾಪ್ ಕೊಡುತ್ತೇನೆ ಎಂದು ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದರು.
2011 ರಲ್ಲಿ ಮೊದಲ ಟೆಸ್ಟ್ ಪಂದ್ಯವಾಡುವಾಗ ವಾರ್ನರ್ ತೊಟ್ಟಿದ್ದ ಗ್ರೀನ್ ಕ್ಯಾಪ್ ಇದು. ಹೀಗಾಗಿ ಈ ಕ್ಯಾಪ್ ನ ಬಗ್ಗೆ ವಾರ್ನರ್ ಗೆ ವಿಶೇಷ ನಂಟಿದೆ. ಇದೀಗ ಕೊನೆಯ ಟೆಸ್ಟ್ ಪಂದ್ಯವಾಡುತ್ತಿರುವ ಸಂದರ್ಭದಲ್ಲಿಯೇ ಕ್ಯಾಪ್ ಮಿಸ್ ಆಗಿದ್ದು ಅವರ ದುಃಖಕ್ಕೆ ಕಾರಣವಾಗಿತ್ತು.
ಆದರೆ ಇದೀಗ ಎಷ್ಟೆಷ್ಟು ಹುಡುಕಿದರೂ ಸಿಗದ ಅವರ ಕ್ಯಾಪ್ ಸಿಡ್ನಿಯ ಹೋಟೆಲ್ ರೂಂನಲ್ಲಿ ಪತ್ತೆಯಾಗಿದೆ. ವಾರ್ನರ್ ತಮ್ಮ ಮಗಳಿಗಾಗಿ ಖರೀದಿಸಿದ್ದ ಆಟಿಕೆಗಳ ಬ್ಯಾಗ್ ಜೊತೆಗೆ ಗ್ರೀನ್ ಕ್ಯಾಪ್ ಕೂಡಾ ಪತ್ತೆಯಾಗಿದೆ. ಕ್ಯಾಪ್ ಇಲ್ಲಿ ಹೇಗೆ ಪ್ರತ್ಯಕ್ಷವಾಯಿತು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ತಮ್ಮ ಕ್ಯಾಪ್ ಮರಳಿ ಸಿಕ್ಕ ಖುಷಿಯಲ್ಲಿ ವಾರ್ನರ್ ಇದ್ದಾರೆ.