ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ವಿಕೆಟ್ ಮೇಲೆ ವಿಕೆಟ್ ಬಿದ್ದರೂ ತನಗೆ ಕ್ಯಾರೇ ಇಲ್ಲ ಎನ್ನುವಂತೆ ಆಡುತ್ತಿದ್ದಾರೆ ಅಭಿಷೇಕ್ ಶರ್ಮಾ.
ಟಾಸ್ ಸೋತ ಟೀಂ ಇಂಡಿಯಾ ಇಂದು ಮೊದಲು ಬ್ಯಾಟಿಂಗ್ ಮಾಡುತ್ತಿದೆ. 10 ಓವರ್ ಗೆ ಮೊದಲೇ ಭಾರತದ ಟಾಪ್ ಆರ್ಡರ್ ಬ್ಯಾಟಿಗರೆಲ್ಲರೂ ಏಕಂಕಿಗೆ ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಗಿಲ್ 5, ಸಂಜು ಸ್ಯಾಮ್ಸನ್ 2, ಸೂರ್ಯಕುಮಾರ್ ಯಾದವ್ 1, ತಿಲಕ್ ವರ್ಮ 0, ಅಕ್ಸರ್ ಪಟೇಲ್ 7 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಭಾರತ 5 ವಿಕೆಟ್ ಉದುರಿಸಿಕೊಂಡು ಕೇವಲ 86 ರನ್ ಗಳಿಸಿ ಸಂಕಷ್ಟದಲ್ಲಿದೆ.
ಆದರೆ ಉಳಿದವರು ಎಷ್ಟೇ ಹೀನಾಯವಾಗಿ ಆಡಲಿ, ಅಭಿಷೇಕ್ ಶರ್ಮಾ ಮಾತ್ರ ತಾವು ಬೇರೆಯೇ ಪಿಚ್ ನಲ್ಲಿ ಆಡುತ್ತಿರುವವರಂತೆ ತಮ್ಮ ಎಂದಿನ ಹೊಡೆಬಡಿಯ ಶೈಲಿಯ ಆಟವಾಡುತ್ತಿದ್ದಾರೆ.
ಎಂದಿನಂತೆ ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿರುವುದಲ್ಲದೆ, ತಂಡದ ಒತ್ತಡವನ್ನೂ ಕಡಿಮೆ ಮಾಡುತ್ತಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಅವರು 23 ಎಸೆತ ಎದುರಿಸಿ 50 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಹರ್ಷಿತ್ ರಾಣಾ 18 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.