ಕೋಲ್ಕತ್ತಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಟಿ20 ಸರಣಿ ಆರಂಭವಾಗಲಿದ್ದು, ಭಾರತೀಯ ಅಭಿಮಾನಿಗಳು ಈ ಒಂದು ಟ್ರಂಪ್ ಕಾರ್ಡ್ ನಂತಹ ಆಟಗಾರನ ಮೇಲೆ ಕಣ್ಣಿಟ್ಟಿದ್ದಾರೆ.
ಮೊದಲ ಪಂದ್ಯ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾದಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರ ಮಿಶ್ರಣವಿದೆ. ವಿಶೇಷವಾಗಿ ಬ್ಯಾಟಿಂಗ್ ನಲ್ಲಿ ಕಿರಿಯರದ್ದೇ ಕಾರುಬಾರು.
ಸೂರ್ಯಕುಮಾರ್ ಯಾದವ್ ಬಿಟ್ಟರೆ ತಂಡದಲ್ಲಿರುವ ಅನುಭವಿ ಆಟಗಾರರೆಂದರೆ ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷ್ ದೀಪ್ ಸಿಂಗ್. ಈ ಪೈಕಿ ಮೊಹಮ್ಮದ್ ಶಮಿ ಟ್ರಂಪ್ ಕಾರ್ಡ್ ಆಗಬಲ್ಲರು ಎಂಬ ನಿರೀಕ್ಷೆ ಅಭಿಮಾನಿಗಳದ್ದು.
ಏಕದಿನ ವಿಶ್ವಕಪ್ ಬಳಿಕ ಶಮಿ ಇದೇ ಮೊದಲ ಬಾರಿಗೆ ತಂಡಕ್ಕೆ ಮರಳುತ್ತಿದ್ದಾರೆ. ಹಿರಿಯ ವೇಗಿ ಇಂದು ತಮ್ಮ ತವರಿನಲ್ಲೇ ಆಡುತ್ತಿರುವುದರಿಂದ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಿದೆ. ಜೊತೆಗೆ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಿದ್ದರೂ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಬೌಲಿಂಗ್ ಗೆ ಬಲ ನೀಡಬಲ್ಲ ಆಟಗಾರ ಮೊಹಮ್ಮದ್ ಶಮಿ. ಹೀಗಾಗಿ ಅವರು ಈ ಸರಣಿಯಲ್ಲಿ ಹೇಗೆ ಆಡುತ್ತಾರೆ ಎಂಬುದು ಎಲ್ಲರ ಕುತೂಹಲವಾಗಿದೆ.
ಭಾರತೀಯ ಕಾಲಮಾನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಲ್ಲಾ ಟಿ20 ಪಂದ್ಯಗಳೂ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್ ಆಪ್ ಅಥವಾ ಡಿಡಿ ಸ್ಪೋರ್ಟ್ಸ್ ನಲ್ಲಿ ವೀಕ್ಷಿಸಬಹುದಾಗಿದೆ.