IND vs WI Test: ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್‌ ದಿಟ್ಟ ಹೋರಾಟ: ರೋಚಕ ಘಟ್ಟದತ್ತ ಎರಡನೇ ಟೆಸ್ಟ್‌

Sampriya

ಭಾನುವಾರ, 12 ಅಕ್ಟೋಬರ್ 2025 (19:26 IST)
Photo Courtesy X
ನವದೆಹಲಿ: ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್‌ಗಳ ಹಿನ್ನಡೆಯೊಂದಿಗೆ ಫಾಲೋಆನ್‌ ಅನುಭವಿಸಿದ್ದ ವೆಸ್ಟ್‌ ಇಂಡೀಸ್‌ ತಂಡವು ದಿಟ್ಟ ಹೋರಾಟ ತೋರಿದೆ. ಹೀಗಾಗಿ, ಭಾರತ ಮತ್ತು ವಿಂಡೀಸ್‌ ನಡುವಿನ ಎರಡನೇ ಟೆಸ್ಟ್‌ ರೋಚಕ ಘಟ್ಟ ತಲುಪಿದೆ. 

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಮೂರನೇ ದಿನದಾಟ ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗಳಿಗೆ ಆಲೌಟ್‌ ಆದ ವಿಂಡೀಸ್‌ ತಂಡ ಫಾಲೋ ಆನ್‌ ಬಳಿಕ ದಿಟ್ಟ ಹೋರಾಟ ತೋರಿತು. ಮೂರನೇ ದಿನದ ಅಂತ್ಯಕ್ಕೆ ವಿಂಡೀಸ್‌ 2 ವಿಕೆಟ್‌ಗೆ 173 ರನ್‌ ಗಳಿಸಿದೆ.  ಆದರೂ ಭಾರತ 97 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 

ಶನಿವಾರ 43 ಓವರ್‌ಗಳಲ್ಲಿ 140 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ ತಂಡವು 3ನೇ ದಿನ 248 ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಮೊದಲ ಇನ್ನಿಂಗ್ಸ್‌ ಬಳಿಕ 270 ರನ್‌ಗಳ ಭಾರೀ ಹಿನ್ನಡೆಯಲ್ಲಿದ್ದ ಕಾರಣ ಭಾರತ ಫಾಲೋ ಆನ್‌ ಘೋಷಿಸಿತು. 

ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿ 518 ರನ್​ ಕಲೆ ಹಾಕಿತ್ತು. ಫಾಲೋ ಆನ್‌ ಬಳಿಕ ಬ್ಯಾಟಿಂಗ್‌ ಶುರು ಮಾಡಿದ ವೆಸ್ಟ್‌ ಇಂಡೀಸ್‌ ತಂಡದ ಕೇವಲ 35 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಆರಂಭಿಕ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯಿ ಹೋಪ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. 208 ಎಸೆತಗಳಲ್ಲಿ 138 ರನ್‌ಗಳ ಅಜೇಯ ಶತಕದ ಜೊತೆಯಾಟ ಆಡುವ ಮೂಲಕ ಭಾರತಕ್ಕೆ ತಿರುಗೇಟು ನೀಡಿದರು. 

ಇದಕ್ಕೂ ಮುನ್ನ ಭಾರತೀಯ ಬೌಲರ್‌ಗಳು ಪಾರಮ್ಯ ಮೆರೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಕುಲದೀಪ್‌ ಯಾದವ್‌ 5 ವಿಕೆಟ್‌ ಗೊಂಚಲು ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್‌, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ತಲಾ ಒಂದು ವಿಕೆಟ್‌ ಕಿತ್ತರು. 2ನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ