ಏಷ್ಯಾ ಕಪ್ ಕ್ರಿಕೆಟ್:ಭಾರತ-ಪಾಕಿಸ್ತಾನ ನಡುವೆ ಇಂದು ಮತ್ತೆ ಸಂಡೇ ಧಮಾಕ
ಭಾನುವಾರ, 4 ಸೆಪ್ಟಂಬರ್ 2022 (07:27 IST)
ದುಬೈ: ಕಳೆದ ವಾರವಷ್ಟೇ ಭಾರತ-ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ಸವಿ ಸವಿದ ಅಭಿಮಾನಿಗಳಿಗೆ ಮತ್ತೆ ಈ ವಾರವೂ ಅದೇ ರೋಚಕ ಪಂದ್ಯಕ್ಕೆ ಸಾಕ್ಷಿಯಾಗುವ ಯೋಗ ಬಂದಿದೆ.
ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದಿನಿಂದ ಸೂಪರ್ ಫೋರ್ ಹಂತದ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಎ ಗುಂಪಿನ ಅಗ್ರ ತಂಡವಾದ ಟೀಂ ಇಂಡಿಯಾ ಎರಡನೇ ತಂಡವಾದ ಪಾಕಿಸ್ತಾನವನ್ನು ಎದುರಿಸಲಿದೆ.
ಕಳೆದ ಭಾನುವಾರ ನಡೆದಿದ್ದ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಸಾಹಸದಿಂದ ಗೆದ್ದಿತ್ತು. ಭಾರತಕ್ಕೆ ದೊಡ್ಡ ತಲೆನೋವಾಗಿರುವುದು ಆರಂಭಿಕರು. ಆರಂಭಿಕರು ಟಿ20 ವೇಗಕ್ಕೆ ತಕ್ಕಂತೆ ರನ್ ಮತ್ತು ಅಡಿಪಾಯ ಹಾಕಿಕೊಟ್ಟರೆ ಉಳಿದವರ ಭಾರ ಕಡಿಮೆಯಾಗಬಹುದು. ಬೌಲಿಂಗ್ ನಲ್ಲಿ ಅನುಭವಿ ವೇಗಿಗಳ ಅನುಪಸ್ಥಿತಿ ಭಾರತಕ್ಕೆ ಎದ್ದು ಕಾಣುತ್ತಿದೆ.
ಪಾಕಿಸ್ತಾನ ತಂಡದ ಪರ ಶಾಹಿನ್ ಅಫ್ರಿದಿ ಅನುಪಸ್ಥಿತಿಯಲ್ಲೂ ವೇಗಿ ನದೀಂ ಶಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ಮೊಹಮ್ಮದ್ ರಿಜ್ವಾನ್ ಉತ್ತಮ ಲಯದಲ್ಲಿದ್ದಾರೆ. ಆದರೆ ಬಾಬರ್ ಅಜಮ್ ಕಳೆದೆರಡು ಪಂದ್ಯದಲ್ಲಿ ಆಡಿಲ್ಲ. ಆದರೆ ಪಾಕಿಸ್ತಾನ ನಾಯಕ ಯಾವ ಕ್ಷಣದಲ್ಲಿ ಬೇಕಾದರೂ ಸಿಡಿಯಬಹುದು. ಹೀಗಾಗಿ ಭಾರತ ಎಲ್ಲೂ ತಪ್ಪಾಗದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.