ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಟೀಂ ಇಂಡಿಯಾದಲ್ಲಿ ಡಬಲ್ ಆರ್ (ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್) ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.
ಪೂರ್ಣ ಪ್ರಮಾಣದ ನಾಯಕರಾದ ಬಳಿಕ ರೋಹಿತ್ ಮುನ್ನಡೆಸುತ್ತಿರುವ ಮೊದಲ ಪಂದ್ಯ ಇದಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 43.5 ಓವರ್ ಗಳಲ್ಲಿ 176 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಯಜುವೇಂದ್ರ ಚಾಹಲ್ 4, ವಾಷಿಂಗ್ಟನ್ ಸುಂದರ್ 3, ಮೊಹಮ್ಮದ್ ಸಿರಾಜ್ 1 ಮತ್ತು ಪ್ರಸಿದ್ಧ ಕೃಷ್ಣ 2 ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. 51 ಎಸೆತಗಳಲ್ಲಿ 60 ರನ್ ಚಚ್ಚಿದ ರೋಹಿತ್ ಔಟಾದರು. ಇನ್ನೊಂದೆಡೆ ಇಶಾನ್ ಕಿಶನ್ 28 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಕೊಹ್ಲಿ 8 ಮತ್ತು ರಿಷಬ್ ಪಂತ್ ಕೇವಲ 11 ರನ್ ಗಳಿಸಿ ಔಟಾದರು. ಇದಾದ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಜೋಡಿ ಅಜೇಯರಾಗುಳಿದು ತಂಡಕ್ಕೆ 28 ಓವರ್ ಗಳಲ್ಲಿ ಗೆಲುವು ಕೊಡಿಸಿದರು. ಸೂರ್ಯ ಅಜೇಯ 34 ಮತ್ತು ದೀಪಕ್ ಅಜೇಯ 26 ರನ್ ಗಳಿಸಿದರು. ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.