ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ಟಿ20 ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ, ಹಲವು ದಾಖಲೆಗಳನ್ನು ಮಾಡಿದ್ದಾರೆ.
ಸಾಮಾನ್ಯವಾಗಿ ಚಿನ್ನಸ್ವಾಮಿ ಅಂಗಳದಲ್ಲಿ ಕೊಹ್ಲಿ ಸಮರ್ಥಕರು ಹೆಚ್ಚಾಗಿ ಹಾಜರಿರುತ್ತಾರೆ. ಬೆಂಗಳೂರು ಕೊಹ್ಲಿಗೆ ಎರಡನೇ ತವರು ಮನೆಯಿದ್ದಂತೆ. ಹೀಗಾಗಿ ಇಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದರೆ ಅವರ ಹೆಸರೆತ್ತಿ ಕರೆದು ಚಿಯರ್ ಅಪ್ ಮಾಡುವವರೇ ಜಾಸ್ತಿ. ಆದರೆ ನಿನ್ನೆಯ ಪಂದ್ಯದಲ್ಲಿ ರೋಹಿತ್ ಅಬ್ಬರ ನೋಡಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ರೋಹಿತ್ ಹೆಸರೆತ್ತಿ ಕರೆದು ಚಿಯರ್ ಅಪ್ ಮಾಡುತ್ತಿದುದು ಕಂಡುಬಂದಿದೆ.
ಈ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್ ಟಿ20 ಕ್ರಿಕೆಟ್ ನಲ್ಲಿ 5 ನೇ ಶತಕ ಗಳಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ಸಿಡಿಸಿದ ವಿಶ್ವದಾಖಲೆ ನಿರ್ಮಿಸಿದರು. ನಿನ್ನೆಯ ಪಂದ್ಯದಲ್ಲಿ ಒಟ್ಟು 8 ಸಿಕ್ಸರ್ ಸಿಡಿಸಿದ ರೋಹಿತ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 87 ಸಿಕ್ಸರ್ ಸಿಡಿಸಿ ದಾಖಲೆ ಮಾಢಿದ್ದಾರೆ.
ರಿಂಕು ಸಿಂಗ್ ಜೊತೆಗೆ 190 ರನ್ ಗಳ ಜೊತೆಯಾಟವಾಡಿದ ರೋಹಿತ್ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಯಾವುದೇ ವಿಕೆಟ್ ಗೆ ಅತ್ಯಧಿಕ ಜೊತೆಯಾಟವಾಡಿದ ದಾಖಲೆ ಮಾಡಿದರು. ಟಿ20 ತಂಡದ ನಾಯಕನಾಗಿ ರೋಹಿತ್ 42 ನೇ ಗೆಲುವು ದಾಖಲಿಸುವ ಮೂಲಕ ಗರಿಷ್ಠ ಗೆಲುವು ಪಡೆದ ನಾಯಕರ ಪಟ್ಟಿಯಲ್ಲಿ ಇಂಗ್ಲೆಂಡ್ ನ ಇಯಾನ್ ಮಾರ್ಗನ್, ಪಾಕಿಸ್ತಾನದ ಬಾಬರ್ ಅಜಮ್ ಜೊತೆಗೆ ದಾಖಲೆ ಹಂಚಿಕೊಂಡಿದ್ದಾರೆ.