ಪದಾರ್ಪಣೆ ಪಂದ್ಯದಲ್ಲೇ ಶತಕ ಗಳಿಸಿದ ಪೃಥ್ವಿ ಶಾ ಏನೆಲ್ಲಾ ದಾಖಲೆ ಮಾಡಿದರು ಗೊತ್ತಾ?

ಕೃಷ್ಣವೇಣಿ ಕೆ

ಗುರುವಾರ, 4 ಅಕ್ಟೋಬರ್ 2018 (17:14 IST)
ರಾಜ್ ಕೋಟ್: ಪೃಥ್ವಿ ಶಾ.. ಈ ಹೆಸರು ದೇಶೀಯ ಕ್ರಿಕೆಟ್ ನಲ್ಲಿ ಭಾರೀ ಸದ್ದು ಮಾಡಿತ್ತು. ದೇಶೀಯ ಕ್ರಿಕೆಟ್ ನಲ್ಲಿ ಇವರು ಆಡುತ್ತಿದ್ದ ಪರಿ ನೋಡಿ ಆಗಲೇ ಹಲವರು ಈ ಹುಡಗನನ್ನು ಸಚಿನ್ ತೆಂಡುಲ್ಕರ್ ಗೆ ಹೋಲಿಸಿದ್ದರು.

ನಿರೀಕ್ಷೆಗಳ ಮೂಟೆಯನ್ನೇ ಹೊತ್ತು ಚಿಕ್ಕ ವಯಸ್ಸಿನಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಆ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಡುವ ಅವಕಾಶ ಪಡೆದ ಪೃಥ್ವಿ ಶಾ ಚೊಚ್ಚಲ ಶತಕ ಗಳಿಸಿದ್ದಾರೆ. ಆ ಮೂಲಕ ಮೊದಲ ಪಂದ್ಯದಲ್ಲೇ ಶತಕ ಗಳಿಸಿದ 15 ನೇ ಭಾರತೀಯ ಆಟಗಾರನೆನಿಸಿದ್ದಾರೆ. ಅಲ್ಲದೆ, ಅತ್ಯಂತ ಕಿರಿಯ ವಯಸ್ಸಿನಲ್ಲಿ (18 ವರ್ಷ 329 ದಿನ) ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ದಾಖಲೆ ಮಾಡಿದ್ದಾರೆ. ಅಲ್ಲದೆ, ಕಿರಿಯ ವಯಸ್ಸಿನಲ್ಲಿ ಟೆಸ್ಟ್ ಶತಕ ಗಳಿಸಿದ ದಾಖಲೆ ಮಾಡಿರುವ ಸಚಿನ್ ತೆಂಡುಲ್ಕರ್ (17 ವರ್ಷ) ನಂತರದ ಸ್ಥಾನ ಪಡೆದಿದ್ದಾರೆ.

ಮೂರು ರನ್ ಕದಿಯುವ ಮೂಲಕ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಎಲ್ಲೂ ಮೊದಲ ಪಂದ್ಯ ಆಡುವ ನರ್ವಸ್ ನೆಸ್ ತೋರಿಸಲೇ ಇಲ್ಲ. ಆರಾಮವಾಗಿ ಬೌಂಡರಿ, ಎರಡು ರನ್ ಕದಿಯುತ್ತಲೇ ಹೋದರು. ಎದುರಾಳಿ ಬೌಲರ್ ಗಳು ಅವರ ಮೇಲೆ ಸ್ವಲ್ಪವೂ ಪರಿಣಾಮ ಬೀರಿದಂತೆ ತೋರಲಿಲ್ಲ.  ಅಷ್ಟರ ಮಟ್ಟಿಗೆ ಅವರು ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವುದು ಸ್ಪಷ್ಟವಾಗಿ ತೋರುತ್ತಿತ್ತು!

ವಿಶೇಷವೆಂದರೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯಗಳಲ್ಲೂ ಪೃಥ್ವಿ ಶಾ ಶತಕದ ಮೂಲಕ ವೃತ್ತಿ ಆರಂಭಿಸಿದ್ದರು. ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲೂ ಶತಕ ಗಳಿಸಿರುವುದು ವಿಶೇಷ. ಪೃಥ್ವಿ ಶಾ ನಿರ್ಬೀಡೆಯ ಇನಿಂಗ್ಸ್ ಓಪನಿಂಗ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಶಿಖರ್ ಧವನ್,  ಕೆಎಲ ರಾಹುಲ್, ಮುರಳಿ ವಿಜಯ್ ಎದೆಯಲ್ಲಿ ಕಂಪನ ಮೂಡಿಸಿರುವುದಂತೂ ಸತ್ಯ!

ದಿನದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ 72 ರನ್, ರಿಷಬ್ ಪಂತ್ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ