ದುಬೈ: ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಮಾಡಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಪಾಕ್ ಮೊಹಮ್ಮದ್ ರಿಜ್ವಾನ್ ಅಬ್ಬರದ ಅರ್ಧಶತಕ (71), ಮೊಹಮ್ಮದ್ ನವಾಜ್ ಸ್ಪೋಟಕ ಬ್ಯಾಟಿಂಗ್ (42) ನಿಂದಾಗಿ ಒಂದು ಎಸೆತ ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆದ್ದು ಬೀಗಿತು. ಇದರೊಂದಿಗೆ ಮೊನ್ನೆಯ ಸೋಲಿಗೆ ಸೇಡು ತೀರಿಸಿಕೊಂಡಿತು.
ಈ ಸೋಲಿಗೆ ಕಾರಣವಾಗಿದ್ದು ಭಾರತದ ಮಧ‍್ಯಮ ಕ್ರಮಾಂಕದ ಬ್ಯಾಟಿಗರು ಮತ್ತು ಲೀಡಿಂಗ್ ಬೌಲರ್ ಗಳು. ಕಳೆದ ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಲ್ಲಿ ಶೂನ್ಯ ಸಂಪಾದಿಸಿದರೆ ಬೌಲಿಂಗ್ ನಲ್ಲಿ 4 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಬಳಿಸಿ 44 ರನ್ ಬಿಟ್ಟುಕೊಟ್ಟರು. ತಂಡದ ವೇಗದ ಬೌಲಿಂಗ್ ನ ಅನುಭವಿ ಎನಿಸಿಕೊಂಡ ಭುವನೇಶ್ವರ್ ಕುಮಾರ್ 4 ಓವರ್ ಗಳಲ್ಲಿ 40 ರನ್ ನೀಡಿದರು. ಅದರಲ್ಲೂ 19 ನೇ ಓವರ್ ನಲ್ಲಿ 19 ರನ್ ಬಿಟ್ಟುಕೊಟ್ಟರು. ಯಜುವೇಂದ್ರ ಚಾಹಲ್ 4 ಓವರ್ ಗಳಲ್ಲಿ ಬಿಟ್ಟುಕೊಟ್ಟಿದ್ದು 43 ರನ್! ಇದ್ದವರಲ್ಲಿ ಅರ್ಷ್ ದೀಪ್ ಸಿಂಗ್ ಪರವಾಗಿಲ್ಲ. 3.5 ಓವರ್ ಗಳಲ್ಲಿ ಅವರು ನೀಡಿದ್ದು 27 ರನ್. ಆದರೆ 18 ನೇ ಓವರ್ ನಲ್ಲಿ ಕ್ಯಾಚ್ ಬಿಟ್ಟು ಅದನ್ನೂ ಮಣ್ಣುಪಾಲು ಮಾಡಿದರು.