ಚಾಂಪಿಯನ್ಸ್ ಟ್ರೋಫಿಗೆ ಸೋನಿಯಾ ಗಾಂಧಿ ಅಳಿಯ: ವಿವಾದಕ್ಕೀಡಾಯ್ತು ಬಿಸಿಸಿಐ ನಡೆ
ಶನಿವಾರ, 17 ಜೂನ್ 2017 (12:38 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ನಾಳೆ ಇಂಗ್ಲೆಂಡ್ ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಬಿಸಿಸಿಐ ವಿಶೇಷ ಆಹ್ವಾನಿತರ ಸೀಟ್ ನಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಟಿಕೆಟ್ ಸಿಕ್ಕಿರುವುದು ವಿವಾದಕ್ಕೆ ಕಾರಣವಾಗಿದೆ.
ಐಸಿಸಿ ಟೂರ್ನಿಗಳಲ್ಲಿ ಬಿಸಿಸಿಐಗೆ ತನ್ನದೇ ಅಧಿಕಾರಿಗಳಿಗೆ ವಿಶೇಷವಾಗಿ 24 ಸೀಟು ಮೀಸಲು ಸಿಗುತ್ತದೆ. ಇದರಲ್ಲಿ ಸಾಮಾನ್ಯವಾಗಿ ಬಿಸಿಸಿಐ ಅಧಿಕಾರಿಗಳು, ಬಿಸಿಸಿಐಗೆ ನೆರವು ನೀಡುತ್ತಿರುವವರಿಗೆ ಟಿಕೆಟ್ ನೀಡಲಾಗುತ್ತದೆ.
ಆದರೆ ಈ ಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಹೆಸರು ಸೇರಿಕೊಂಡಿರುವುದು ಹುಬ್ಬೇರುವಂತೆ ಮಾಡಿದೆ. ಆದರೆ ಈ ಬಗ್ಗೆ ಮಾಧ್ಯಮಗಳು ಸುಪ್ರೀಂಕೋರ್ಟ್ ನೇಮಿತ ಆಡಳಿತ ಮಂಡಳಿಯನ್ನು ಕೇಳಿದಾಗ ಟಿಕೆಟ್ ಹಂಚಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈತೊಳೆದುಕೊಂಡಿದೆ.
ಆದರೆ ಬಿಸಿಸಿಐ ತನ್ನ ಖಜಾನೆಯಿಂದ ವೆಚ್ಚ ಮಾಡಿ ಬುಕ್ ಮಾಡುವ ಸೀಟ್ ನಲ್ಲಿ ಕ್ರಿಕೆಟ್ ಗೆ ಸಂಬಂಧಪಡದ ವಾದ್ರಾ ಹೆಸರು ಬಂದಿದ್ದು ಹೇಗೆ ಎಂದು ಹಲವರ ಪ್ರಶ್ನೆ.