ಲೀಸೆಸ್ಟರ್: ಲೀಸೆಸ್ಟರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಬ್ಯಾಟಿಗ ಶ್ರೀಕರ್ ಭರತ್ ದ್ವಿತೀಯ ಇನಿಂಗ್ಸ್ ನಲ್ಲೂ ಮಿಂಚಿದ್ದು ಆರಂಭಿಕರಾಗಿ ಕಣಕ್ಕಿಳಿದು 43 ರನ್ ಗಳಿಸಿದ್ದಾರೆ.
ದ್ವಿತೀಯ ಇನಿಂಗ್ಸ್ ನಲ್ಲಿ ಭಾರತದ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಬ್ಯಾಟಿಂಗ್ ಗಿಳಿಯಲಿಲ್ಲ. ಬದಲಾಗಿ ಭರತ್-ಶುಬ್ನಂ ಗಿಲ್ ಆರಂಭಿಕರಾಗಿ ಕಣಕ್ಕಿಳಿದರು. ಈ ನಡುವೆ ಶುಬ್ನಂ ಗಿಲ್ 38 ರನ್ ಗಳಿಸಿ ಔಟಾದರು. ಬಳಿಕ ಬಂದ ಹನುಮ ವಿಹಾರಿ 20 ರನ್ ಗೆ ವಿಕೆಟ್ ಒಪ್ಪಿಸಿದರು.
ರವೀಂದ್ರ ಜಡೇಜಾ ಶೂನ್ಯ ಸುತ್ತಿದರೆ, ಇದೀಗ 14 ರನ್ ಗಳಿಸಿರುವ ಶ್ರೇಯಸ್ ಅಯ್ಯರ್ ಮತ್ತು 1 ರನ್ ಗಳಿಸಿರುವ ಶ್ರಾದ್ಧೂಲ್ ಠಾಕೂರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ. ಮೊದಲ ಇನಿಂಗ್ಸ್ ನಲ್ಲಿ ಭಾರತ 246 ರನ್ ಗೆ ಡಿಕ್ಲೇರ್ ಮಾಡಿಕೊಂಡಿದ್ದರೆ, ಲೀಸೆಸ್ಟರ್ 244 ರನ್ ಗಳಿಗೆ ಆಲೌಟ್ ಆಗಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಲೀಸೆಸ್ಟರ್ ಪರ ಬೌಲಿಂಗ್ ಮಾಡುತ್ತಿರುವ ಭಾರತದ ನವದೀಪ್ ಸೈನಿ 3 ವಿಕೆಟ್ ಕಬಳಿಸಿದ್ದಾರೆ.