ಹಾರ್ದಿಕ್-ಜಡೇಜಾ ದಾಖಲೆಯ ಜೊತೆಯಾಟ: 303 ರನ್ ಗುರಿ ನೀಡಿದ ಟೀಂ ಇಂಡಿಯಾ

ಬುಧವಾರ, 2 ಡಿಸೆಂಬರ್ 2020 (12:40 IST)
ಬೆಂಗಳೂರು: ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ದಾಖಲೆ ಜತೆಯಾಟದ ನೆರವಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗಳಿಗೆ ಗೆಲ್ಲಲು 303 ರನ್ ಗಳ ಗುರಿ ನೀಡಿದೆ.

 

ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭವೇ ಉತ್ತಮವಾಗಿರಲಿಲ್ಲ. ಶಿಖರ್ ಧವನ್ ಬೇಗನೇ ನಿರ್ಗಮಿಸಿದರೆ ಮಯಾಂಕ್ ಸ್ಥಾನದಲ್ಲಿ ಆರಂಭಿಕರಾಗಿ ಬಡ್ತಿ ಪಡೆದು ಬಂದ ಶಬ್ನಂ ಗಿಲ್ 33 ರನ್ ಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ನಾಯಕ ಕೊಹ್ಲಿ ಕೆಲ ಹೊತ್ತು ಏಕಾಂಗಿ ಹೋರಾಟ ನಡೆಸಿದರಾದರೂ 63 ರನ್ ಗಳಿಸುವಷ್ಟರಲ್ಲಿ ಅವರೂ ಪೆವಿಲಿಯನ್ ಗೆ ಮರಳಿದರು. ಆಗ ಭಾರತ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು.

ಆದರೆ ಆರನೇ ವಿಕೆಟ್ ಗೆ ಜೋಡಿಯಾದ ಹಾರ್ದಿಕ್ ಪಾಂಡ್ಯ-ರವೀಂದ್ರ ಜಡೇಜಾ ಜೋಡಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿತು. ಇವರಿಬ್ಬರೂ ಆರನೇ ವಿಕೆಟ್ ಗೆ 150 ರನ್ ಗಳ ಜತೆಯಾಟವಾಡಿದರು. ಇದು ಆಸ್ಟ್ರೇಲಿಯಾ ವಿರುದ್ಧ ಭಾರತದ ಆರನೇ ವಿಕೆಟ್ ಗೆ ದಾಖಲೆಯ ಜತೆಯಾಟವಾಗಿದೆ. ಇದಕ್ಕೂ ಮೊದಲು ಎಸ್ ರಮೇಶ್, ರಾಬಿನ್ ಸಿಂಗ್ 123 ಗಳಿಸಿದ್ದೇ ದಾಖಲೆಯಾಗಿತ್ತು. ಈ ಪೈಕಿ ಹಾರ್ದಿಕ್ ಮತ್ತೆ ಅಮೋಘ ಆಟವಾಡಿ ಅಜೇಯ 92 ರನ್ ಗಳಿಸಿದರೆ ಜಡೇಜಾ ಅಜೇಯ 66 ರನ್ ಗಳಿಸಿ ತಕ್ಕ ಸಾಥ್ ನೀಡಿದರು. ಇದರೊಂದಿಗೆ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ