ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಭಾರತ ಸಜ್ಜಾಗಿದೆ.
ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ರನ್ನು ಹೊರಗಿಟ್ಟಿದ್ದಕ್ಕೆ ನಾಯಕ ಕೊಹ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಈ ಪಂದ್ಯದಲ್ಲೂ ಇಬ್ಬರಿಗೆ ಸ್ಥಾನ ನೀಡುವ ಸಾಧ್ಯತೆ ಕಡಿಮೆ.
ಯಾಕೆಂದರೆ ರೋಹಿತ್ ಬದಲು ರೆಹಾನೆಗೆ ಸ್ಥಾನ ನೀಡಲಾಗಿತ್ತು. ಅಶ್ವಿನ್ ಬದಲು ಜಡೇಜಾಗೆ ಅವಕಾಶ ನೀಡಲಾಗಿತ್ತು. ಇಬ್ಬರೂ ತಮಗೆ ಕೊಟ್ಟ ಜವಾಬ್ಧಾರಿಯನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಇಬ್ಬರನ್ನೂ ಕಿತ್ತು ಹಾಕುವ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಸದ್ಯಕ್ಕಿಲ್ಲ. ಹಾಗಾಗಿ ರೋಹಿತ್ ಮತ್ತು ಅಶ್ವಿನ್ ಮತ್ತೆ ಬೆಂಚ್ ಕಾಯಿಸಬೇಕಾದೀತು.
ಒಂದು ವೇಳೆ ರೋಹಿತ್ ಗೆ ಸ್ಥಾನ ನೀಡಬೇಕಾದರೆ ಮಾಜಿ ನಾಯಕ ಗಂಗೂಲಿ ಸಲಹೆಯಂತೆ ಆರಂಭಿಕ ಸ್ಥಾನ ನೀಡಬೇಕು. ಆಗ ಮಯಾಂಕ್ ಅಗರ್ವಾಲ್ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮತ್ತೆ ಅಂತಿಮ ತಂಡದ ಆಯ್ಕೆಯೇ ಕೊಹ್ಲಿಗೆ ದೊಡ್ಡ ತಲೆನೋವಾಗಲಿದೆ. ಇದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದುನೋಡಬೇಕಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.