ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 3 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ನಾಯಕನ ಆಟವಾಡಿದ ಶಿಖರ್ ಧವನ್ 97 ರನ್ ಗಳಿಗೆ ಔಟಾದರೆ ಅವರಿಗೆ ತಕ್ಕ ಸಾಥ್ ನೀಡಿದ ಶುಬ್ನಂ ಗಿಲ್ 64 ರನ್ ಗಳಿಸಿದರು. ನಂತರ ಬಂದ ಶ್ರೇಯಸ್ ಅಯ್ಯರ್ 54 ರನ್ ಗಳಿಸಿ ಗಮನ ಸೆಳೆದರು. ಆದರೆ ಸೂರ್ಯಕುಮಾರ್ ಯಾದವ್ (13), ಸಂಜು ಸ್ಯಾಮ್ಸನ್ (12) ರನ್ ಗಳಿಸದೇ ಭಾರತ ತಂಡಕ್ಕೆ ಕೊಂಚ ಹಿನ್ನಡೆಯಾಯಿತು. ಕೊನೆಯಲ್ಲಿ ದೀಪಕ್ ಹೂಡಾ 27, ಅಕ್ಸರ್ ಪಟೇಲ್ 21 ರನ್ ಗಳಿಸಿ ತಂಡದ ಮೊತ್ತ 300 ಗಡಿ ದಾಟಲು ಸಹಾಯ ಮಾಡಿದರು.
ಈ ಮೊತ್ತ ಬೆನ್ನತ್ತಿದ ವಿಂಡೀಸ್ ಆರಂಭದಲ್ಲೇ ಶೈ ಹೋಪ್ (7) ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಕೈಲ್ ಮೇಯರ್ಸ್ 75, ಬ್ರೂಕ್ಸ್ 46, ಬ್ರೆಂಡನ್ ಕಿಂಗ್ 54 ರನ್ ಗಳಿಸಿ ಭಾರತಕ್ಕೆ ಭೀತಿ ತಂದೊಡ್ಡಿದ್ದರು. ಆದರೆ ಇಬ್ಬರು ಸೆಟ್ ಬ್ಯಾಟಿಗರನ್ನು ಶ್ರಾದ್ಧೂಲ್ ಠಾಕೂರ್ ಪೆವಿಲಿಯನ್ ಗಟ್ಟಿದ್ದರಿಂದ ಕೊಂಚ ನಿಟ್ಟುಸಿರುವ ಬಿಡುವಂತಾಗಿತ್ತು.
ಆದರೆ ಕೊನೆಯಲ್ಲಿ ಸಿಡಿದ ಶೆಫರ್ಡ್ ಅಜೇಯ 39, ಹೊಸೈನ್ 32 ರನ್ ಗಳಿಸಿ ಇನ್ನೇನು ಗೆಲುವು ತಂದೇ ಕೊಡುತ್ತಾರೆ ಎಂಬಂತಿದ್ದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಬೇಕಾಗಿದ್ದಾಗ ಮೊಹಮ್ಮದ್ ಸಿರಾಜ್ ಕೇವಲ 1 ರನ್ ಬಿಟ್ಟುಕೊಟ್ಟು ಗೆಲುವು ಭಾರತದ ಪಾಲಾಗಿಸಿದರು.