ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 2 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಬಹಳ ದಿನಗಳ ನಂತರ ತಂಡಕ್ಕೆ ಕಮ್ ಬ್ಯಾಕ್ ಮಾಡಿದ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ ತಲಾ 2 ವಿಕೆಟ್ ಕಬಳಿಸಿದರು. ರವಿ ಬಿಷ್ಣೋಯ್ ಕೂಡಾ 2 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ಅರ್ಷ್ ದೀಪ್ ಸಿಂಗ್ ಪಾಲಾಯಿತು. ಐರ್ಲೆಂಡ್ ಪರ ಬೆರಿ ಮೆಕರ್ಥಿ ಔಟಾಗದೇ 51 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಆರಂಭ ಉತ್ತಮವಾಗಿತ್ತು. ಆದರೆ ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿ ಔಟಾದರು. ಅವರ ಬೆನ್ನಲ್ಲೇ ತಿಲಕ್ ವರ್ಮ ಬಂದ ಬಾಲ್ ಗೇ ಔಟಾಗಿ ಮರಳಿದಾಗ ಟೀಂ ಇಂಡಿಯಾ ಆತಂಕ್ಕೀಡಾಗಿತ್ತು. ಆದರೆ ಇನ್ನೊಂದೆಡೆ ಋತುರಾಜ್ ಗಾಯಕ್ ವಾಡ್ 19 ರನ್ ಗಳಿಸಿದ್ದರೆ, ಸಂಜು ಸ್ಯಾಮ್ಸನ್ 1 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ವರುಣನ ಆಗಮನವಾಯಿತು. ಆಗ ತಂಡದ ಮೊತ್ತ 6.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಗಳಾಗಿತ್ತು. ಕೊನೆಗೆ ಮಳೆ ಬಿಡದೇ ಹೋದಾಗ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಗೆಲುವು ನಿರ್ಧರಿಸಲಾಯಿತು.