ಹಾರ್ದಿಕ್ ಪಾಂಡ್ಯ ಮಾಡುತ್ತಿದ್ದ ಕೆಲಸವನ್ನು ಟೀಂ ಇಂಡಿಯಾಗಾಗಿ ಮಾಡಿದ ಸಹೋದರ ಕೃಣಾಲ್
ಭಾನುವಾರ, 4 ನವೆಂಬರ್ 2018 (22:30 IST)
ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 109 ರನ್ ಗಳಿಸಿತ್ತು. ಸುಲಭ ಗೆಲುವಿನ ಗುರಿಯಾಗಿದ್ದರೂ ಮೊದಲ ಓವರ್ ನಲ್ಲೇ ರೋಹಿತ್ ಶರ್ಮಾ ರೂಪದಲ್ಲಿ ಟೀಂ ಇಂಡಿಯಾಗೆ ಆಘಾತ ಸಿಕ್ಕಿತು. ಅವರ ಬೆನ್ನಲ್ಲೇ ನಿರಂತರವಾಗಿ ವಿಕೆಟ್ ಬೀಳುತ್ತಿದ್ದಾಗ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಅಪರೂಪಕ್ಕೆ ಅವಕಾಶ ಸಿಕ್ಕಿದ ಕೆಎಲ್ ರಾಹುಲ್ ಕೇವಲ 16 ರನ್ ಗಳಿಸಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದರು.
ಹೊಡೆಬಡಿಯ ಆಟಗಾರ ರಿಷಬ್ ಪಂತ್ 1 ರನ್ ಗಳಿಸಿದರೆ ಮನೀಶ್ ಪಾಂಡೆ 19 ರನ್ ಗೆ ಔಟಾದರು. ಈ ಸಂದರ್ಭದಲ್ಲಿ ಜತೆಯಾದ ಹಾರ್ದಿಕ್ ಪಾಂಡ್ಯ ಸಹೋದರ ಕೃಣಾಲ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಅದರಲ್ಲೂ ವಿಶೇಷವಾಗಿ ಹಾರ್ದಿಕ್ ಕೆಳ ಕ್ರಮಾಂಕದಲ್ಲಿ ಮಾಡುತ್ತಿದ್ದ ಕೆಲಸವನ್ನು ಸಹೋದರ ಕೃಣಾಲ್ ಮಾಡಿದರು. ಕೃಣಾಲ್ ಕೇವಲ 9 ಬಾಲ್ ಗಳಲ್ಲಿ 21 ರನ್ ಗಳಿಸಿದರೆ ಕಾರ್ತಿಕ್ 34 ಬಾಲ್ ಗಳಲ್ಲಿ 31 ರನ್ ಗಳಿಸಿದರು. ಭಾರತ 17.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.