ಚೇಸಿಂಗ್ ವೀರ ವಿರಾಟ್ ಕೊಹ್ಲಿಯಿಂದ ಟೀಂ ಇಂಡಿಯಾಗೆ ಗೆಲುವು

ಗುರುವಾರ, 19 ಸೆಪ್ಟಂಬರ್ 2019 (08:56 IST)
ಮೊಹಾಲಿ: ಕಳೆದ ಕೆಲವು ದಿನಗಳಿಂದ ಮಂಕಾಗಿದ್ದ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಸುಧಾರಿಸಿಕೊಂಡ ವಿರಾಟ್ ಕೊಹ್ಲಿ ದ.ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ತಾವು ಚೇಸಿಂಗ್ ವೀರ ಎನ್ನುವುದನ್ನು ಸಾಬೀತುಪಡಿಸಿದರು.


ನಿನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ 7 ವಿಕೆಟ್ ಗಳ ಭರ್ಜರಿ ಜಯ ಕೊಡಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ಭಾರತದ ಪರ ದೀಪಕರ್ ಚಹರ್ 2 ವಿಕೆಟ್ ಕಬಳಿಸಿದರೆ ನವದೀಪ್ ಸೈನಿ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 33 ರನ್ ಗಳಿಸುವಷ್ಟರಲ್ಲಿ ಆರಂಭಿಕ ರೋಹಿತ್ ಶರ್ಮಾರನ್ನು ಕಳೆದುಕೊಂಡಿತು. ರೋಹಿತ್ 12 ರನ್ ಗಳಿಸಿ ಔಟಾದರು. ಬಳಿಕ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಜೋಡಿ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಧವನ್ 40 ರನ್ ಗಳಿಗೆ ಔಟಾಗುವುದರೊಂದಿಗೆ ಈ ಜೋಡಿ ಬೇರ್ಪಟ್ಟಿತ್ತು. ಈ ವೇಳೆ ರಿಷಬ್ ಪಂತ್ ಕ್ರೀಸ್ ಗಿಳಿದರೂ ಅವರ ಇನಿಂಗ್ಸ್ 4 ರನ್ ಗಳಿಗೆ ಕೊನೆಯಾಯಿತು. ಆದರೆ ನಂತರ ಬಂದ ಶ್ರೇಯಸ್ ಅಯ್ಯರ್ ಅಜೇಯವಾಗಿ 16 ರನ್ ಗಳಿಸಿ ನಾಯಕನಿಗೆ ತಕ್ಕ ಸಾಥ್ ನೀಡಿದರು.

ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 4 ಬೌಂಡರಿ, ಮೂರು ಭರ್ಜರಿ ಸಿಕ್ಸರ್ ಗಳ ನೆರವಿನಿಂದ 72 ರನ್ ಗಳಿಸಿ ಅಜೇಯರಾಗುಳಿದರು. ಜತೆಗೆ ಮತ್ತೆ ಭಾರತದ ಯಶಸ್ವೀ ರನ್ ಚೇಸಿಂಗ್ ಗೆ ಉಪಯುಕ್ತ ಕೊಡುಗೆ ನೀಡಿದರು. ಅಂತಿಮವಾಗಿ ಭಾರತ 19 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆಎ 151 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ