ಪುರುಷರ ಕೈಲಾಗದ್ದನ್ನು ಮಹಿಳಾ ಕ್ರಿಕೆಟರುಗಳು ಮಾಡಿ ತೋರಿಸಿದರು!

ಸೋಮವಾರ, 3 ಜುಲೈ 2017 (08:31 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಸೋತಿದ್ದ ಪುರುಷರ ಕ್ರಿಕೆಟ್ ತಂಡವನ್ನೇ ನಾಚಿಸುವ ರೀತಿ ಆಡಿದ ಭಾರತದ ಮಹಿಳಾ ಕ್ರಿಕೆಟರುಗಳು ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಅದೇ ಪಾಕ್ ವಿರುದ್ಧ ಭರ್ಜರಿ 95 ರನ್ ಗಳ ಜಯ ಸಾಧಿಸಿದ್ದಾರೆ.


ಭಾರತದ ಪರ ಏಕ್ತಾ ಬಿಸ್ಟ್ ಅಕ್ಷರಶಃ ಸಿಂಹಿಣಿಯಂತೆ ಎದುರಾಳಿಗಳ ಮೇಲೆರಗಿದರು. ಅವರು 5 ವಿಕೆಟ್ ಕಿತ್ತು ಪಾಕಿಸ್ತಾನವನ್ನು 38.1 ಓವರ್ ಗಳಲ್ಲಿ ಜುಜುಬಿ 74 ರನ್ ಗಳಿಗೆ ನಿಯಂತ್ರಿಸಲು ಸಫಲರಾದರು. ಗೆಲುವಿಗೆ ಕೇವಲ 170 ರನ್ ಗಳ ಗುರಿ ಪಡೆದಿದ್ದ ಪಾಕ್ ಒಂದು ಹಂತದಲ್ಲಿ ಕೇವಲ 26 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು 50 ರೊಳಗೆ ಆಲೌಟ್ ಆಗುವ  ಅಪಾಯದಲ್ಲಿತ್ತು. ಆದರೆ ಸನಾ ಮಿರ್ ಮತ್ತು ನಹೀದಾ ಖಾನ್ ಆ ಅವಮಾನವನ್ನು ತಪ್ಪಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಭಾರತ ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕಿ ಮಿಥಾಲಿ ರಾಜ್ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಭಾರತದ ಬ್ಯಾಟಿಂಗ್ ನೋಡುವಾಗ ಪುರುಷರ ಹಾದಿಯನ್ನೇ ಮಹಿಳೆಯರೂ ಹಿಡಿಯುತ್ತಾರಾ ಎಂಬ ಸಂಶಯ ಮೂಡಿತ್ತು. ಆದರೆ ಬೌಲರ್ ಗಳು ಹಾಗಾದಂತೆ ನೋಡಿಕೊಂಡರು. ಇದರೊಂದಿಗೆ ಭಾರತ ಆಡಿದ ಮೂರೂ ಪಂದ್ಯಗಳನ್ನು ಗೆದ್ದುಕೊಂಡಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ