ಟೀಂ ಇಂಡಿಯಾಗೆ ಮತ್ತೊಮ್ಮೆ ಡಬ್ಲ್ಯುಟಿಸಿ ಫೈನಲ್ ನಲ್ಲಿ ಹೀನಾಯ ಸೋಲು
ಭಾನುವಾರ, 11 ಜೂನ್ 2023 (17:51 IST)
ದಿ ಓವಲ್: ಎರಡನೇ ಬಾರಿಯಾದರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆಲ್ಲುವ ಟೀಂ ಇಂಡಿಯಾದ ಕನಸು ಕೊನೆಗೂ ಕನಸಾಗಿಯೇ ಉಳಿಯಿತು. ಆಸ್ಟ್ರೇಲಿಯಾ 209 ರನ್ ಗಳಿಂದ ಫೈನಲ್ ಗೆದ್ದು ಡಬ್ಲ್ಯುಟಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ದ್ವಿತೀಯ ಇನಿಂಗ್ಸ್ ನಲ್ಲಿ 444 ರನ್ ಗಳ ಬೃಹತ್ ಮೊತ್ತ ಗುರಿ ಬೆನ್ನತ್ತಿ ಹೊರಟ ಟೀಂ ಇಂಡಿಯಾ ಐದನೇ ದಿನವಾದ ಇಂದು ಕೇವಲ 234 ರನ್ ಗಳಿಗೆ ಆಲೌಟ್ ಆಯಿತು. ಎರಡೂ ಇನಿಂಗ್ಸ್ ಗಳಲ್ಲಿ ಅಜಿಂಕ್ಯಾ ರೆಹಾನೆ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಪ್ರದರ್ಶನ ಬರಲಿಲ್ಲ. ನಿನ್ನೆ 44 ರನ್ ಗಳಿಸಿ ಅಜೇಯರಾಗುಳಿದಿದ್ದ ಕೊಹ್ಲಿ ಇಂದು ಮತ್ತೆ ಐದು ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಅದೇ ಓವರ್ ನಲ್ಲಿ ರವೀಂದ್ರ ಜಡೇಜಾ ಕೂಡಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದಾಗ ಟೀಂ ಇಂಡಿಯಾ ಸೋಲು ಖಚಿತವಾಯ್ತು.
ಈ ನಡುವೆ ಅಜಿಂಕ್ಯಾ ರೆಹಾನೆ 46 ರನ್ ಗಳಿಸಿದರೆ ಅವರಿಗೆ ಕೊಂಚ ಹೊತ್ತು ಸಾಥ್ ನೀಡಿದ ಕೆಎಸ್ ಭರತ್ 23 ರನ್ ಗಳಿಸಿದರು. ವೇಗದ ಪಿಚ್ ಎಂದು ಮೋಸ ಹೋದ ಟೀಂ ಇಂಡಿಯಾ ಅಶ್ವಿನ್ ರನ್ನು ಹೊರಗಿಟ್ಟು ದೊಡ್ಡ ತಪ್ಪು ಮಾಡಿತು. ಇತ್ತ ಆಸೀಸ್ ಸ್ಪಿನ್ನರ್ ನಥನ್ ಲಿಯೋನ್ 4 ವಿಕೆಟ್ ಕಬಳಿಸಿ ಮಿಂಚಿದರು. ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಪಂದ್ಯ ಶ್ರೇಷ್ಠರಾದರು. ಇದರೊಂದಿಗೆ ಆಸೀಸ್ ಐಸಿಸಿಯ ಎಲ್ಲಾ ಮಾದರಿಯ ಟೂರ್ನಿಯಲ್ಲಿ ಚಾಂಪಿಯನ್ ಶಿಪ್ ಪಡೆದ ಗರಿಮೆ ತನ್ನದಾಗಿಸಿಕೊಂಡಿತು.