‘ಅನಿಲ್ ಕುಂಬ್ಳೆ ಬಗ್ಗೆ ದೂರುವ ಆಟಗಾರರು ಮೊದಲು ತಂಡದಿಂದ ಹೊರಹೋಗಬೇಕು’

ಬುಧವಾರ, 21 ಜೂನ್ 2017 (09:22 IST)
ಮುಂಬೈ: ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆಯಿತ್ತಿರುವುದು ಮತ್ತು ಅದಕ್ಕೆ ಅವರು ನೀಡಿರುವ ಕಾರಣ ಓದಿದ ಮೇಲೆ ಹಲವು ಮಂದಿ ಟೀಂ ಇಂಡಿಯಾ ಆಟಗಾರರ ಮೇಲೆ ಸಿಟ್ಟು ಹೊರ ಹಾಕುತ್ತಿದ್ದಾರೆ.

 
ಅವರಲ್ಲಿ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಕೂಡಾ ಒಬ್ಬರು. ಅನಿಲ್ ಕುಂಬ್ಳೆಯಂತಹ ಪ್ರತಿಭಾವಂತನನ್ನು ಸರಿಯಾಗಿ ನಡೆಸಿಕೊಳ್ಳದ ತಂಡದ ಬಗ್ಗೆ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಒಂದು ವೇಳೆ ಆಟಗಾರರಿಗೆ ಕೋಚ್ ಆಗಿ ಒಬ್ಬ ಜಾಲಿ ಮನುಷ್ಯ ಬೇಕಾಗಿದ್ದ ಅಂದರೆ  ಕುಂಬ್ಳೆ ಸೂಕ್ತರಲ್ಲ. ನೋಡಪ್ಪಾ ಬೋರಾಗಿದ್ದರೆ ಈವತ್ತು ಶಾಪಿಂಗ್ ಹೋಗು, ರೆಸ್ಟ್ ಮಾಡು ಎಂದು ಸೋಮಾರಿತನ ತುಂಬುವ ಕೋಚ್ ಆಟಗಾರರಿಗೆ ಅಗತ್ಯವಾಗಿದ್ದರೆ, ಕುಂಬ್ಳೆಗೆ ಹೇಳಿ ಮಾಡಿಸಿದ ಜಾಗವಲ್ಲವಿದು. ಕುಂಬ್ಳೆಯ ಬದಲು ಮೊದಲು ಅಂತಹ ಮನಸ್ಥಿತಿಯ ಆಟಗಾರರು ತಂಡದಿಂದ ಹೊರಹೋಗಬೇಕು.

ಇದರೊಂದಿಗೆ ಮುಂದೆ ಬರುವ ಕೋಚ್ ಒಂದೋ ನಾಯಕನಿಗೆ ತಲೆಬಾಗಿರಬೇಕು ಅಥವಾ ಆಟಗಾರರನ್ನು ಅವರ ಇಷ್ಟಕ್ಕೆ ಬಿಡುವವರಾಗಿರಬೇಕು ಎನ್ನುವುದು ಸ್ಪಷ್ಟ. ಹೀಗೆ ಮಾಡದಿದ್ದರೆ ಅನಿಲ್ ಕುಂಬ್ಳೆಯಂತೆ ಒಬ್ಬ ಲೆಜೆಂಡ್ ಈ ರೀತಿ ನಿರ್ಗಮಿಸಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕುಂಬ್ಳೆಯಂತಹ ಒಬ್ಬ ದಿಗ್ಗಜ ಕ್ರಿಕೆಟಿಗ ಭಾರತೀಯ ಕ್ರಿಕೆಟ್ ಗೆ ಕೋಚ್ ಆಗಿ ಮತ್ತು ಆಟಗಾರನಾಗಿ ಇಷ್ಟೆಲ್ಲಾ ಸೇವೆ ಸಲ್ಲಿಸಿದ ಮೇಲೆ ಈ ರೀತಿ ನಿರ್ಗಮಿಸಬೇಕಾಗಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿ. ಇದು ಭಾರತೀಯ ಕ್ರಿಕೆಟ್ ಗೇ ದುಃಖದ ದಿನ ಎಂದು ಗವಾಸ್ಕರ್ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ