ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ವೃತ್ತಿ ಜೀವನಕ್ಕೆ ಎದುರಾಗಿದೆ ಕಂಟಕ!
ಬುಧವಾರ, 8 ಡಿಸೆಂಬರ್ 2021 (09:25 IST)
ನವದೆಹಲಿ: ನ್ಯೂಜಿಲೆಂಡ್ ತಂಡವನ್ನು ಇತ್ತೀಚೆಗೆ ಐಸಿಸಿ ಟೂರ್ನಿಗಳಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೇನ್ ವಿಲಿಯಮ್ಸನ್ ವೃತ್ತಿ ಜೀವನಕ್ಕೆ ಕಂಟಕ ಎದುರಾಗಿದೆ!
ಕೇನ್ ನಾಯಕತ್ವವನ್ನು ಎದುರಾಳಿಗಳೂ ಕೊಂಡಾಡುತ್ತಿದ್ದಾರೆ. ಅವರ ಬ್ಯಾಟಿಂಗ್ ಕೂಡಾ ಉನ್ನತ ಮಟ್ಟದಲ್ಲೇ ಇತ್ತು. ಈ ಸಂದರ್ಭದಲ್ಲೇ ಅವರು ಕೆಲವು ಸಮಯ ಕ್ರಿಕೆಟ್ ನಿಂದ ದೂರವುಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕಾರಣ, ಟೆನಿಸ್ ಎಲ್ಬೋ ಸಮಸ್ಯೆ. ಈ ಹಿಂದೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಇದೇ ಸಮಸ್ಯೆ ಕಾಡಿತ್ತು. ಇದರಿಂದಾಗಿ ಬ್ಯಾಟಿಂಗ್ ಮಾಂತ್ರಿಕ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಅಲ್ಲದೆ, ಕೆಲವು ಸಮಯ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದರು. ಇದೇ ವೇಳೆಯೇ ತಮ್ಮ ದೋಷ ಪರಿಹಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ಸರ್ಪದೋಷ ನಿವಾರಣೆಗೆ ಪೂಜೆ ಮಾಡಿಸಿದ್ದರು.
ಇದೀಗ ಕೇನ್ ವಿಲಿಯಮ್ಸನ್ ಕೂಡಾ ಟೆನಿಸ್ ಎಲ್ಬೋ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಅವರು ಭಾರತದ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಆಡಿರಲಿಲ್ಲ. ಕಳೆದ ಒಂದು ವರ್ಷದಿಂದ ಅವರಿಗೆ ಈ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಬಳಿಕ ಕೆಲವು ದಿನ ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ.