ಮುಂಬೈ ಮಳೆ ಸಂತ್ರಸ್ತರ ನೆರವಿಗೆ ಸಚಿನ್ ತೆಂಡುಲ್ಕರ್ ರದ್ದು ಹೀಗೊಂದು ಸೇವೆ!
ಗುರುವಾರ, 31 ಆಗಸ್ಟ್ 2017 (09:27 IST)
ಮುಂಬೈ: ಸಚಿನ್ ತೆಂಡುಲ್ಕರ್ ಸದ್ದಿಲ್ಲದೇ ಸಮಾಜ ಮುಖಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಇದೀಗ ತಮ್ಮದೇ ತವರು ನೆಲದಲ್ಲಿ ಮಳೆಯಿಂದ ಸಂತ್ರಸ್ತರಾಗಿರುವವರ ನೆರವಿಗೆ ಧಾವಿಸಿದ್ದಾರೆ.
ಮುಂಬೈ ಮಹಾನಗರಿಯಲ್ಲಿ ಗಲ್ಲಿ ಪ್ರದೇಶಗಳಲ್ಲಿ ಕಡುಬಡವರ ಪರಿಸ್ಥಿತಿ ಈಗ ದೇವರಿಗೇ ಪ್ರೀತಿ. ಮನೆಯೊಳಗೆ ಕಸ, ಕೊಳಕು ನೀರು ತುಂಬಿ ಬಡವರ ಪಾಡು ಹೇಳತೀರದಂತಾಗಿದೆ.
ಅಂತಹ ಬಡವರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಅವರ ಮನೆಯೊಳಗೆ ತುಂಬಿಕೊಂಡಿದ್ದ ಕಸ ಕಡ್ಡಿಗಳನ್ನು ಹೊರತೆಗೆಯಲು ಮುಂದಾಗಿರುವ ಅಪ್ನಾಲಯ ಸಂಸ್ಥೆಯೊಂದಿಗೆ ಸಚಿನ್ ಕೈ ಜೋಡಿಸಿದ್ದಾರೆ.
ಅಪ್ನಾಲಯ ಎಂಬ ಸ್ವಯಂ ಸೇವಕ ಸಂಘಕ್ಕೂ ಸಚಿನ್ ಗೂ ನಿಕಟ ಸಂಬಂಧವಿದೆ. ಈ ಸಂಘದ ಸಂಚಾಲಕರಲ್ಲಿ ಸಚಿನ್ ಪತ್ನಿ ಅಂಜಲಿಯವರ ತಾಯಿ ಅನಾಬೆಲ್ ಮೆಹ್ತಾ ಕೂಡಾ ಒಬ್ಬರು. ಹಿಂದೆ ಸಚಿನ್ ಬರೆದ ಆತ್ಮಕತೆ ಪ್ಲೇಯಿಂಗ್ ಇಟ್ಸ್ ಮೈ ವೇ ಪುಸ್ತಕದ ಗೌರವ ಧನವನ್ನೂ ಇದೇ ಸಂಸ್ಥೆಗೆ ಸಚಿನ್ ನೀಡಿದ್ದರು.
ಇದೀಗ ಮುಂಬೈಯ ಗಲ್ಲಿ ಪ್ರದೇಶದ ಜನರಿಗೆ ಆಹಾರ, ವಸತಿ ಕಲ್ಪಿಸಲು ಸಚಿನ್ ಕೈ ಜೋಡಿಸಿದ್ದಾರೆ. ಅಲ್ಲದೆ, ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಈ ಸಂಸ್ಥೆ ಜತೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.