ಬಿಸಿಸಿಐ ಏನು ದೇವರಿಗಿಂತ ದೊಡ್ಡದಾ? ಸಿಟ್ಟಿಗೆದ್ದ ಶ್ರೀಶಾಂತ್
ಶನಿವಾರ, 12 ಆಗಸ್ಟ್ 2017 (09:50 IST)
ಕೊಚ್ಚಿ: ಕೇರಳ ಮೂಲದ ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಬಿಸಿಸಿಐಗೆ ಆದೇಶಿಸಿದರೂ ಕ್ಯಾರೇ ಎನ್ನದ ಕ್ರಿಕೆಟ್ ದೊರೆಗಳ ಮೇಲೆ ಸಿಟ್ಟಿಗೆದ್ದಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾಗಿರುವ ಶ್ರೀಶಾಂತ್ ಗೆ ಮತ್ತೆ ಕ್ರಿಕೆಟ್ ಆಡಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದರೆ ಆಡಲು ಅವಕಾಶ ಮಾಡಿಕೊಡುವ ಬದಲು ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಬಿಸಿಸಿಐ ತೀರ್ಮಾನಿಸಿದೆ. ಇದು ಶ್ರೀಶಾಂತ್ ರನ್ನು ಸಿಟ್ಟಿಗೆಬ್ಬಿಸಿದೆ.
ಸರಣಿ ಟ್ವೀಟ್ ಮಾಡಿರುವ ಅವರು ಬಿಸಿಸಿಐ ಎಂದರೆ ದೇವರಿಗಿಂತಲೂ ದೊಡ್ಡದಾ ಎಂದು ಕ್ರುದ್ಧರಾಗಿ ಕೇಳಿದ್ದಾರೆ. ‘ಬಿಸಿಸಿಐ ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ನ್ನು ಎಂದಿಗೂ ಸಹಿಸುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳೋಣ. ಹಾಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮತ್ತೆ ಅವಕಾಶ ಮಾಡಿಕೊಡುತ್ತಿರುವುದೇಕೆ?
ಒಬ್ಬರಿಗೆ ಎಷ್ಟು ಕೆಡುಕು ಮಾಡಬಹುದೋ ಅದಕ್ಕಿಂತ ಹೆಚ್ಚು ಬಿಸಿಸಿಐ ಮಾಡುತ್ತಿದೆ. ನನ್ನ ಅಮಾಯಕತೆ ಮತ್ತೆ ಮತ್ತೆ ಸಾಬೀತಾದ ಮೇಲೂ ಈ ರೀತಿ ದೌರ್ಜನ್ಯವೆಸಗುತ್ತಿರುವುದೇಕೆ? ಎಂದು ಸಿಟ್ಟಿಗೆದ್ದಿರುವ ಶ್ರೀಶಾಂತ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.