ಬಂಕಿ ಬಿಹಾರಿ ದೇವಸ್ಥಾನದ ಮುಂದೆ ನೋಟುಗಳ ಮಳೆ!

ಸೋಮವಾರ, 20 ಜುಲೈ 2015 (13:29 IST)
ಆಗ್ರಾದ ಬೃಂದಾವನದ ಬಳಿಯ ಬಂಕಿ ಬಿಹಾರಿ ದೇವಸ್ಥಾನದ ಬಳಿ ಶನಿವಾರ ಮಳೆ ಸುರಿಯಿತು. ಆದರೆ ಸುರಿದಿದ್ದು ನೀರಲ್ಲ. 500 ರೂಪಾಯಿಗಳ ನೋಟಿನ ಮಳೆ. ಈ ನೋಟುಗಳ ಮಳೆಯನ್ನು ಸುರಿಸಿದ್ದು ಮಾತ್ರ ಒಂದು ಕೋತಿ. 
ಹಣವೆಂದರೆ ಹೆಣವು ಬಾಯಿ ಬಿಡುತ್ತದೆ ಎಂದು ಹೇಳಲಾಗುತ್ತದೆ. ಅಂದ ಮೇಲೆ ಜನರು ಸುಮ್ಮನಿರುತ್ತಾರೆ. ಮಂಗ ಸುರಿಸುತ್ತಿದ್ದ ನೋಟುಗಳನ್ನು ಸುತ್ತಮುತ್ತಲು ನೆರೆದಿದ್ದ ಜನರು, ಭಿಕ್ಷುಕರು ಎದ್ದು ಬಿದ್ದು ಎತ್ತಿಕೊಂಡರು. ಇಷ್ಟೆಲ್ಲಾ ಹಣವನ್ನು ಕಳೆದುಕೊಂಡವರು ಯಾರೆಂದು ಯಾರು ಕೂಡ ಯೋಚಿಸಲಿಲ್ಲ. ಆದರೆ ವಿಪರ್ಯಾಸವೆಂದರೆ ಹಣವನ್ನು ಕಳೆದುಕೊಂಡವರು ಈ ದೃಶ್ಯವನ್ನೆಲ್ಲಾ ಅಸಹಾಯಕರಾಗಿ ನೋಡುತ್ತ ನಿಂತಿದ್ದರು. 
 
ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ತಿಳಿದು ಬಂದ ಸತ್ಯವೇನೆಂದರೆ ಆಗ್ರಾ ಪ್ರವಾಸಕ್ಕೆಂದು ಮುಂಬೈನ ಬೊರಿವಿಲಿಯಿಂದ ಪತಿ ಮತ್ತು ಮಕ್ಕಳ ಜತೆ ಜತೆ ಬಂದಿದ್ದ ಹೇಮಾವತಿ ಸೋನ್ಕರ್ (50) ಪರ್ಸ್‌ನಲ್ಲಿ 1.5 ಲಕ್ಷ ಹಣವನ್ನು ಇಟ್ಟುಕೊಂಡಿದ್ದರು. 500 ರೂಪಾಯಿಗಳ ಮೂರು ಬಂಡಲ್‌ಗಳನ್ನು ಎಗರಿಸಿದ ಕೋತಿಯೊಂದು ಬಂಕಿ ಬಿಹಾರಿ ದೇವಾಲಯದ ಮುಂದೆ 500 ರೂಪಾಯಿ ನೋಟುಗಳನ್ನು ಒಂದೊಂದಾಗಿ ಎಸೆದಿದೆ. 
 
ಕೋತಿ ಹಣ ಸುರಿಸುತ್ತಿದ್ದಂತೆ ದೇವರ ದರ್ಶನಕ್ಕೆ ಆಗಮಿಸಿದ್ದ ಕೆಲ ಭಕ್ತಾದಿಗಳು, ಹೂ ಹಣ್ಣು ವ್ಯಾಪಾರ ಮಾಡುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಭಿಕ್ಷುಕರು  ಧಾವಿಸಿ ಬಂದು ಹಣವನ್ನು ಹೆಕ್ಕಿಕೊಂಡು ಪರಾರಿಯಾಗಿದ್ದಾರೆ. 
 
ಕಣ್ಣ ಮುಂದೆ ಲಕ್ಷಾಂತರ ರೂಪಾಯಿಗಳನ್ನು  ಕಳೆದುಕೊಂಡ ಕುಟುಂಬ ಹತಾಶೆಯಿಂದ ಅಲ್ಲಿಂದ ಮರಳಿದೆ. 
 
ಬೃಂದಾವನದಲ್ಲಿ ಮಂಗಗಳ ಕಾಯ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 

ವೆಬ್ದುನಿಯಾವನ್ನು ಓದಿ