ಕಿರಿಕ್ ಅತ್ತೆಯ ಆನ್‌ಲೈನ್ ಸೇಲ್!

ಗುರುವಾರ, 26 ನವೆಂಬರ್ 2015 (09:29 IST)
ಅತ್ತೆ - ಸೊಸೆ ಜಗಳ ಸಾಮಾನ್ಯವಾಗಿ ಹೆಚ್ಚಿನ ಕುಟುಂಬಗಳಲ್ಲಿ ಕಂಡುಬರುವ ವಿಷಯವೇ. ಅತ್ತೆ ಸೊಸೆಯನ್ನು ಹೊಡೆದು ಬಡಿದು ಹಿಂಸಿಸುವುದು, ಸೊಸೆ ಅತ್ತೆಗೆ ವಿನಾಕಾರಣ ತೊಂದರೆ ನೀಡುವುದು ಇತ್ಯಾದಿ ಪ್ರಕರಣಗಳನ್ನು ನೋಡಿರುತ್ತಿರಿ. ಕೇಳಿರುತ್ತಿರಿ. ಆದರೆ ತನ್ನ ಅತ್ತೆಯ ಕಾಟಕ್ಕೆ ರೋಸಿ ಹೋದ ಸೊಸೆಯೊಬ್ಬಳು ಏನು ಮಾಡಿದಳು ಗೊತ್ತೆ. ತಿಳಿಯಲು ಮುಂದೆ ಓದಿ. 

ಮಹಿಳೆಯೊಬ್ಬಳು ತನ್ನ ಅತ್ತೆಯ ವರ್ತನೆಯಿಂದ ಬೇಸತ್ತು ಆಕೆಯನ್ನು ಆನ್‍ಲೈನ್‍ನಲ್ಲಿ ಮಾರಾಟಕ್ಕಿಟ್ಟ ವಿಚಿತ್ರ ಪ್ರಸಂಗ ನಡೆದಿದೆ."ನನ್ನ ಅತ್ತೆಗೆ 60 ರ ಹರೆಯ.  ಮಧುರ ಮಾತುಗಳಿಂದ ನೆರೆಹೊರೆಯವರನ್ನೆಲ್ಲ ಕೊಲ್ಲಲು ಆಕೆ ಸಮರ್ಥಳು. ಅಡುಗೆಯ ಅತ್ಯುತ್ತಮ ವಿಮರ್ಶಕಿ ಆಕೆ, ನೀವು ಏನು ಅಡುಗೆ ಮಾಡಿದರೂ ಅದು ಆಕೆಗೆ ರುಚಿಸಲು ಸಾಧ್ಯವಿಲ್ಲ. ಸದಾ ಗೊಣಗಾಟ. ಆಕೆ ಮಹಾನ್ ಸಲಹೆಗಾರರು ಸಹ", ಎಂದು ಬರೆದ ಆಕೆ ಅತ್ತೆಯನ್ನು ಅಂತರ್ಜಾಲದಲ್ಲಿ ಮಾರಾಟಕ್ಕಿಟ್ಟಿದ್ದಾಳೆ.
 
'ಫೈದಾ ಡಾಟ್ ಕಾಂ', ಹೆಸರಿನ ಆನ್‍ಲೈನ್ ತಾಣದಲ್ಲಿ ಈ ವಿಲಕ್ಷಣ ಜಾಹೀರಾತು ಕಂಡುಬಂದಿದೆ. “ಮದರ್-ಇನ್-ಲಾ ಇನ್ ಗುಡ್ ಕಂಡಿಷನ್” ಎಂಬ ಶೀರ್ಷಿಕೆ ಇರುವ ಈ ಪೋಸ್ಟ್‌ನಲ್ಲಿ ಅತ್ತೆಯ ಭಾವಚಿತ್ರವನ್ನು ಸಹ ಪ್ರಕಟಿಸಿರುವ ಆಕೆ 'ನೀವು ನನ್ನ ಅತ್ತೆಯನ್ನು ಖರೀದಿಸಿ ಅದಕ್ಕೆ ಬದಲಾಗಿ ನನಗೆ ಮಾನಸಿಕ ಶಾಂತಿಗೆ ಸಂಬಂಧಿಸಿದ ಪುಸ್ತಕವನ್ನು ನೀಡಿ', ಎಂದು ಆಕೆ ಬರೆದುಕೊಂಡಿದ್ದಾಳೆ.
 
ಈ ವಿಲಕ್ಷಣ ಜಾಹೀರಾತು ಪೋಸ್ಟ್ ಆದ 10 ನಿಮಿಷದೊಳಗೆ ಫೈದಾ ಸಂಸ್ಥೆಯವರು ಸೈಟ್‍ನಿಂದ ಅದನ್ನು ಕಿತ್ತು ಹಾಕಿದ್ದಾರೆ.
 
ಈ ರೀತಿ ತಮ್ಮ ಸಂಬಂಧಿಕರನ್ನು ಅಂತರ್ಜಾಲದಲ್ಲಿ ಮಾರಾಟಕ್ಕಿಟ್ಟು ಆಕ್ರೋಶ ವ್ಯಕ್ತ ಪಡಿಸುವ ಘಟನೆ ಇದೇ ಮೊದಲಲ್ಲ . ಕಳೆದ ವರ್ಷ ಪತ್ನಿಯೊಬ್ಬಳು ಕ್ವಿಕ್ಕರ್‍. ಕಾಮ್‌ನಲ್ಲಿ ಗಂಡನ ಭಾವಚಿತ್ರವನ್ನು ಸಾಕುಪ್ರಾಣಿಗಳ ವಿಭಾಗದಲ್ಲಿ ಸೇರಿಸಿ ಮಾರಾಟಕ್ಕಿಟ್ಟಿದ್ದಳು. 

ವೆಬ್ದುನಿಯಾವನ್ನು ಓದಿ