ಬಿಬಿಎಂಪಿ ಅಧಿಕಾರ ಹಿಡಿಯಲು ವಿವಿಧ ಪಕ್ಷಗಳ ಕಸರತ್ತು

ಮಂಗಳವಾರ, 18 ಆಗಸ್ಟ್ 2015 (14:56 IST)
-ಗುಣವರ್ಧನ ಶೆಟ್ಟಿ   
ಬಿಬಿಎಂಪಿ ಚುನಾವಣೆಗೆ ವಿವಿಧ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಕೈಕೊಂಡಿವೆ. ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಛಲದಿಂದ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾ ಪ್ರಚಾರದಲ್ಲಿ ತೊಡಗಿವೆ. ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ 560ಕೋಟಿ ರೂ.ಗಿಂತ ಹೆಚ್ಚು ಹಣದ ಹೊಳೆ ಹರಿಯಬಹುದೆಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಟಿವಿ ಜಾಹೀರಾತುಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಿವೆ.

ಹಿಂದಿನ ಬಿಬಿಎಂಪಿ ಆಡಳಿತದ ಹುಳುಕುಗಳನ್ನು ಬಿಚ್ಚಿಟ್ಟು ನಮಗೇ ಓಟು ನೀಡಿ ಎಂದು ಕಾಂಗ್ರೆಸ್ ಹೇಳುತ್ತಿದೆ. ನಾವು ಬೆಂಗಳೂರಿಗೆ ಕ್ಲೀನ್ ರಾಜಧಾನಿ ಎಂಬ ಹೆಸರು ತಂದಿದ್ದೇವೆ, ನಮಗೆ ಓಟು ಕೊಡಿ ಎಂದು ಬಿಜೆಪಿ ಹೇಳುತ್ತಿದೆ. ಬಿಬಿಎಂಪಿ ಚುನಾವಣೆಗೆ ಇಷ್ಟೊಂದು ಅಬ್ಬರದ ಪ್ರಚಾರ, ಟಿವಿ ಜಾಹೀರಾತುಗಳು ಪಕ್ಷಗಳಿಗೆ ಏಕೆ ಬೇಕಾಗಿದೆ?  ಬಿಬಿಎಂಪಿ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕೆಂದು ಎಲ್ಲಾ ಪಕ್ಷಗಳು ತುದಿಗಾಲಲ್ಲಿ ನಿಂತಿರುವುದು ಇದಕ್ಕೆ ಕಾರಣ. 
 
ಕಣದಲ್ಲಿರುವ  1,121 ಅಭ್ಯರ್ಥಿಗಳು ತಲಾ 50 ಲಕ್ಷ ರೂ. ವೆಚ್ಚ ಮಾಡಬಹುದು ಎಂದು ಲೆಕ್ಕಾ ಹಾಕಿದರೂ ಒಟ್ಟು ಪ್ರಚಾರದ ಖರ್ಚು 560 ಕೋಟಿ ರೂ. ಮೀರುತ್ತದೆ. ಮಾಜಿ ಕಾರ್ಪೊರೇಟರ್‌ಗಳು,  ಗುತ್ತಿಗೆದಾರರು, ಡೆವಲಪರ್‌ಗಳು, ರಿಯಲ್ ಎಸ್ಟೇಟ್ ಕುಳಗಳು, ಹೀಗೆ ನಾನಾ ವರ್ಗಕ್ಕೆ ಸೇರಿದ ಜನರು  ಚುನಾವಣೆ ಕಣಕ್ಕೆ ಧುಮುಕಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. 
 
ಚುನಾವಣೆ ಪ್ರಚಾರ ವೆಚ್ಚದ ಗರಿಷ್ಠ ಮಿತಿಯನ್ನು  5 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಬಹುತೇಕ ಮಂದಿ ತಾವು 5 ಲಕ್ಷದೊಳಗೆ ಖರ್ಚು ಮಾಡಿದ್ದೇವೆ ಎಂದು ದಾಖಲೆಯಲ್ಲಿ ತೋರಿಸಿರುತ್ತಾರೆ. ಆದರೆ ಅವರು ಖರ್ಚು ಮಾಡುವುದು ವೆಚ್ಚದ ಮಿತಿಗಿಂತ ಐದಾರು ಪಟ್ಟು  ಹೆಚ್ಚಾಗಿರುತ್ತದೆಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಇಷ್ಟೊಂದು ಹಣದ ಹೊಳೆ ಹರಿಸುವ ಅಭ್ಯರ್ಥಿಗಳು ಚುನಾವಣೆ ಗೆದ್ದರೆ, ತಾವು ಪ್ರಚಾರಕ್ಕೆ ವೆಚ್ಚ ಮಾಡಿದ ಹಣ ವಾಪಸ್ ಪಡೆಯಲು ಅಕ್ರಮದ ದಾರಿ ಹಿಡಿಯದೇ ಇರುತ್ತಾರಾ ಎಂಬ ಸಂಶಯ ಆವರಿಸಿದೆ. ಏಕೆಂದರೆ ಬಿಬಿಎಂಪಿ ಭ್ರಷ್ಟಾಚಾರದ ಕೂಪ ಎನ್ನುವುದು ಜನಜನಿತವಾಗಿದೆ. ಕೋಟ್ಯಂತರ ರೂ. ಹಣವು ಬಿಬಿಎಂಪಿಯಲ್ಲಿ ಪೋಲಾಗಿದೆ. ಇದರಿಂದ ನಗರದ ಅಭಿವೃದ್ಧಿಯೂ ಕುಂಠಿತವಾಗಿದೆ.

 ಆಡಳಿತಕ್ಕೆ ಕೆಟ್ಟ ಉದಾಹರಣೆಗಳಲ್ಲಿ ಒಂದು ಬಿಬಿಎಂಪಿಯಾಗಿದೆ. ಸಂಸ್ಥೆಯ ಬೆನ್ನೆಲುಬು ಭ್ರಷ್ಟಾಚಾರ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಸವೆದಿದೆ. ಬಿಬಿಎಂಪಿ ಚುನಾವಣೆ ಫಲಿತಾಂಶ  ಕೂಡ ನಮ್ಮ ನಿತ್ಯಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಚುನಾವಣೆಯಲ್ಲಿ ಒಟ್ಟು  ಮತದಾನ 45% ಕೂಡ ದಾಟುವುದಿಲ್ಲ ಎನ್ನುವುದು ಸಮಸ್ಯೆಯಾಗಿದೆ.
 
ದೀರ್ಘ ಕಾಲದವರೆಗೆ ರಾಜಕೀಯ ಮತ್ತು ಇತರೆ ಶಕ್ತಿಗಳು ನಗರ ಎದುರಿಸುವ ನೈಜ ಅಪಾಯಗಳಿಂದ ಮತ್ತು ನಿಜವಾದ ಪರಿಹಾರಗಳಿಂದ ನಮ್ಮ ಗಮನ ಬೇರೆಡೆ ಸೆಳೆದಿವೆ. ನಗರದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ, ಕಸ  ಸಾಗಣೆಯ ಸಮಸ್ಯೆಯಿದೆ, ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ, ಒಳಚರಂಡಿ ಸಮಸ್ಯೆಗಳಿವೆ. ತಗ್ಗು ಪ್ರದೇಶದಲ್ಲಿ ಮಳೆಗಾಲದಲ್ಲಿ ಪ್ರವಾಹದೋಪಾದಿಯಲ್ಲಿ ನೀರು ನುಗ್ಗುತ್ತದೆ. ರಸ್ತೆಗಳಲ್ಲಿ ಅಲ್ಲಲ್ಲಿ ಹಳ್ಳ, ಕೊಳ್ಳಗಳಿಂದ ಅಪಘಾತಗಳಿಗೆ ಎಡೆಮಾಡುತ್ತಿವೆ. ಅನೇಕ ರಸ್ತೆಗಳು ಟಾರು ಕಾಣದೇ ಎಷ್ಟೋ ವರ್ಷಗಳಾಗಿವೆ. ಅನೇಕ ಬಡಾವಣೆಗಳು ಕಸದ ಕೊಂಪೆಗಳಂತೆ ಕಾಣುತ್ತವೆ. ಆದರೆ ನಮ್ಮ ಕಾರ್ಪೊರೇಟರುಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. 

ಬೆಂಗಳೂರಿನಲ್ಲಿ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಿ ಕ್ಲೀನ್ ಸಿಟಿ ಎಂಬ ಹೆಸರನ್ನು ಉಳಿಸಬೇಕಾಗಿದೆ. ಆದ್ದರಿಂದ ನಿಷ್ಕಳಂಕ, ಬದ್ಧ ಅಭ್ಯರ್ಥಿಗಳಿಗೆ ಮಾತ್ರ ನಾವು ಮತ ಹಾಕಬೇಕಾಗಿದೆ. ಬೆಂಗಳೂರು ಸ್ಮಾರ್ಟ್ ನಗರವಾಗಬೇಕಾದರೆ ಅದು ಉತ್ತಮ ಆಡಳಿತದ ನಗರವಾಗಬೇಕು ಮತ್ತು ಬಿಬಿಎಂಪಿಯಲ್ಲಿ ಬದ್ಧತೆಯ ಕಾರ್ಪೊರೇಟರ್‌ಗಳು ಇರಬೇಕು. ಸೂಕ್ತ ಅಭ್ಯರ್ಥಿಗೆ  ನಮ್ಮ ಮತದಾನದ ಮೂಲಕ ಅದನ್ನು ಖಾತರಿಪಡಿಸಬೇಕಾಗಿದೆ. 
 

ವೆಬ್ದುನಿಯಾವನ್ನು ಓದಿ