ಬಿಬಿಎಂಪಿಯಲ್ಲಿ ಇನ್ನೈದು ವರ್ಷ ಬಿಜೆಪಿಯ ದರ್ಬಾರು

ಮಂಗಳವಾರ, 25 ಆಗಸ್ಟ್ 2015 (17:29 IST)
-ಗುಣವರ್ಧನ ಶೆಟ್ಟಿ 
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದು ಬಿಜೆಪಿ 100 ಸ್ಥಾನಗಳೊಂದಿಗೆ ಭರ್ಜರಿ ಜಯಭೇರಿ ಬಾರಿಸಿದ್ದರೆ ಕಾಂಗ್ರೆಸ್ 76 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.  ಉಳಿದಂತೆ ಜೆಡಿಎಸ್ 14 ಮತ್ತು ಇತರರ 8 ಸ್ಥಾನಗಳಲ್ಲಿ ಗೆದ್ದಿವೆ. ಈ ಸಾರಿ ನಡೆದ ಎಲ್ಲಾ ಸಮೀಕ್ಷೆಗಳೂ ತಲೆಕೆಳಗಾಗಿ ಬಿಜೆಪಿ ಗೆದ್ದಿರುವುದು ಇತರೆ ಪಕ್ಷಗಳಿಗೆ ಆಶ್ಚರ್ಯ ಮೂಡಿಸಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಬರುತ್ತದೆಂದು ಸಮೀಕ್ಷೆಗಳು ಹೇಳಿದ್ದವು.

ಈ ಬಾರಿ ಜನರು ಬಿಜೆಪಿಗೆ ಯಾವ ಮಾನದಂಡವನ್ನು ನೋಡಿ ಓಟು ಮಾಡಿರಬಹುದು ಎನ್ನುವುದೇ ಪ್ರಶ್ನಾರ್ಥಕವಾಗಿದೆ. ಬಿಜೆಪಿಯ ಐದುವರ್ಷಗಳ ಬಿಬಿಎಂಪಿ ಆಡಳಿತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಕೂಗು ಕೇಳಿಬಂದಿತ್ತು. ರಸ್ತೆಗಳು, ಕಸ ನಿರ್ವಹಣೆ ವಿಧಾನ, ನೀರು ಪೂರೈಕೆ ವ್ಯವಸ್ಥೆ ಎಲ್ಲವೂ ಕಳಪೆಯಾಗಿತ್ತು.  ಸಾವಿರಾರು ಕೋಟಿ ರೂ.ಗಳ ಸಾಲದ ಹೊರೆ ಬಿಬಿಎಂಪಿ ತಲೆಯ ಮೇಲಿದೆ. ಆದರೂ ಜನರು ಬಿಜೆಪಿಗೆ ಓಟು ಮಾಡಿದ್ದಾರೆಂದರೆ ಆಡಳಿತ ವಿರೋಧಿ ಮತಗಳು ಬಿಜೆಪಿಗೆ ಬಿದ್ದಿರಬಹುದಾದ ಸಾಧ್ಯತೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವೈಖರಿ ಮತದಾರರಿಗೆ ಪ್ರಿಯವಾಗಿಲ್ಲದಿರಬಹುದು.

  ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್ ಕುಮಾರಸ್ವಾಮಿ  ಕೆರೆ, ಕಟ್ಟೆಗಳನ್ನು ನುಂಗಿದರೂ, ಸರ್ಕಾರಿ ಭೂಮಿ ನುಂಗಿದರೂ ನೀವೇನೂ ಮಾಡಬೇಡಿ ಎಂಬ ಸಂದೇಶವನ್ನು ಬೆಂಗಳೂರಿನ ಜನತೆ ನಮಗೆ ನೀಡಿದ್ದಾರೆ.  ಬಿಬಿಎಂಪಿ ವಿಸರ್ಜನೆ ಮಾಡಿ ಒಡಿಯುತ್ತೇವೆ ಎಂದು ಹೇಳಿದ್ದೀರಲ್ಲಾ, ಹಾಗೆ ಮಾಡದೇ ಬಿಜೆಪಿಗೆ ಸಂಪೂರ್ಣ ಸಹಕಾರ ಕೊಡಿ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ಗೆ ಸಲಹೆ ಮಾಡಿದ್ದಾರೆ. ಐದು ವರ್ಷ ಅವರೇ ಆಳಲಿ, ಹಿಂದಿನ ಐದುವರ್ಷ ನೋಡಿದ್ದಾಗಿದೆ. ಮುಂದಿನ ಐದುವರ್ಷ ಅವರಿಗೆ ತೊಂದರೆ ಮಾಡಬೇಡಿ ಎಂದು ಕುಮಾರಸ್ವಾಮಿ ಹತಾಶೆಯ ನುಡಿಗಳನ್ನು ನುಡಿದರು.  ಭ್ರಷ್ಟಾಚಾರ ಯಾರು ಹೆಚ್ಚಿಗೆ ಮಾಡುತ್ತಾರೆ ಅಂತಹವರಿಗೆ ಓಟು ಕೊಡಬೇಕು ಎಂದು ಬೆಂಗಳೂರು ಜನತೆ ತೀರ್ಮಾನ ಮಾಡಿರುವಂತೆ ಕಾಣುತ್ತದೆ ಎಂದೂ ಕುಮಾರಸ್ವಾಮಿ ಹತಾಶೆಯಿಂದ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ