18 ವರ್ಷ ಅನಾಥ; ಏಕಾಏಕಿ ಕೋಟ್ಯಾಧಿಪತಿ

ಬುಧವಾರ, 10 ಜೂನ್ 2015 (12:24 IST)
ಆತ ಹುಟ್ಟಿನಿಂದ ಅನಾಥನಾಗಿ ಬೆಳೆದ. ತನ್ನ ಜೀವನದಲ್ಲಿ ಆತ ಅನುಭವಿಸಿದ ಕಷ್ಟಗಳೆಲ್ಲ 18 ವರ್ಷದ ಬಳಿಕ ಕೊನೆಗೊಂಡಿದೆ. ತುತ್ತು ಅನ್ನಕ್ಕಾಗಿ ತತ್ವಾರ ಪಡುತ್ತಿದ್ದ ಆತನ ಬದುಕಲ್ಲಿ ಭಾಗ್ಯೋದಯವಾಗಿದೆ. ಆತನೀಗ ಬರೊಬ್ಬರಿ 5 ಕೋಟಿ ಆಸ್ತಿಗೆ ಒಡೆಯನಾಗಿದ್ದಾನೆ. ಇದು ಸಿನಿಮಾ ಕಥೆಯಲ್ಲ. ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದ ನೈಜ ಘಟನೆ ಇದು.

ಕಳೆದ 9ವರ್ಷಗಳಿಂದ ವಿಶೇಷ ಬಾಲಮಂದಿರದಲ್ಲಿ ವಾಸಿಸುತ್ತಿದ್ದ ರಾಹುಲ್ ಎಂಬ ಯುವಕನನ್ನು ದತ್ತು ಪಡೆಯಲು ಸಿರಿವಂತ ಉದ್ಯಮಿಗಳೊಬ್ಬರು ನಿರ್ಧರಿಸಿದ್ದು ತಂದೆ-ತಾಯಿ ಪ್ರೀತಿ ಜತೆಗೆ ಧನಿಕನಾಗುವ ಭಾಗ್ಯವು ಕೂಡ ಆತನನ್ನು ಅರಸಿ ಬಂದಿದೆ. ಈತನ ಉತ್ತಮ ನಡತೆ ಆತನಿಗೆ ಈ ಹೊಸ ಜೀವನವನ್ನು ನೀಡಿದೆ. 18 ವರ್ಷದವನಾಗಿರುವ ಆತ ಓದಿನಲ್ಲೂ ಅಪಾರ ಬುದ್ಧಿವಂತನಾಗಿದ್ದು ಜಾಮನಗರದ ತಾಮ್ರ ಲೋಹದ ಉದ್ಯಮಿಯೊಬ್ಬರು ಆತನನ್ನು ದತ್ತು ಪಡೆದುಕೊಂಡಿದ್ದಾರೆ.
 
ಕಳೆದ 30 ವರ್ಷಗಳಿಂದ ಮಕ್ಕಳಿಲ್ಲದ ಕೊರಗನ್ನು ಎದುರಿಸುತ್ತಿದ್ದ ಉದ್ಯಮಿ ಮಾವ್​ಜೀ ಕಟೇಶಿಯಾ ಮತ್ತು ರಮಾ ದಂಪತಿ ದತ್ತು ಪಡೆಯಲು ಬುದ್ಧಿವಂತ ಹಾಗೂ ಸುಸಂಸ್ಕೃತ ಯುವಕನ ಶೋಧದಲ್ಲಿದ್ದರು. ಅನಾಥಾಶ್ರಮದಲ್ಲಿ ರಾಹುಲ್‌ನನ್ನು ನೋಡಿದ ಅವರು ಪ್ರಥಮ ಭೇಟಿಯಲ್ಲೇ ಆತನ ಪ್ರಭಾವಕ್ಕೆ ಒಳಗಾದರು. 
 
ಕಟೇಶಿಯಾ ವಾರ್ಷಿಕವಾಗಿ 5 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಅವರಿಗೆ ನಾಲ್ವರು ಸಹೋದರರಿದ್ದು ಅವರೆಲ್ಲರೂ ಅರ್ಥಿಕವಾಗಿ ಸದೃಢರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ