ಪವಾಡ: ಮೈಮೇಲೆ ಕಾರ್ ಹರಿದರೂ ಬದುಕುಳಿದ ಮಗು

ಶುಕ್ರವಾರ, 10 ಜುಲೈ 2015 (10:57 IST)
ಮೈಮೇಲೆ ಕಾರು ಹರಿದು ಹೋದರು ಮಗುವೊಂದು ಚಿಕ್ಕಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ನಾಸಿಕ್‌ನಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 
ಕಳೆದ ತಿಂಗಳ 18 ರಂದು ಈ ದೃಶ್ಯಾವಳಿಗಳು ಸೆರೆಯಾಗಿದ್ದು, ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿರುವ ಈ ಘಟನೆ ಈಗ ಅಚ್ಚರಿಗೆ ಕಾರಣವಾಗಿದೆ. 
 
ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗ ಪ್ರಕಾರ 3 ವರ್ಷದ ಮಗು ಜೋಯಾ, ತನ್ನ ತಾಯಿಯನ್ನು ಅನುಸರಿಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಳೆ. ಆ ಸಂದರ್ಭದಲ್ಲಿ ಅಲ್ಲಿಯೇ ನಿಂತಿದ್ದ ಬಿಳಿಯ ಕಾರೊಂದು ನಿಧಾನವಾಗಿ ಚಲಿಸ ಹತ್ತಿದ್ದು, ನೋಡ ನೋಡುತ್ತಿದ್ದಂತೆ ಮಗುವಿನ ಮೇಲೆ ಹರಿದಿದೆ. 
 
ಆಕೆಯ ಮೇಲೆ ಎರಡು ಚಕ್ರಗಳು ಹರಿದು ಹೋದ ಮೇಲಷ್ಟೇ ಕಾರ್ ನಿಂತಿದೆ. ತಕ್ಷಣ ಮಗುವಿದ್ದಲ್ಲಿ ಧಾವಿಸಿ ಬಂದ ಸ್ಥಳೀಯರು ಮಗುವನ್ನೆತ್ತಿಕೊಂಡು ಆಸ್ಪತ್ರೆಗೆ ದೌಡಾಸಿಯಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮಾತ್ರ ದಂಗು ಬಡಿದು ಹೋಗಿದ್ದಾರೆ. ಕಾರಿನ ಭಾರವನ್ನು ಸಹಿಸಿಕೊಂಡು ಮಗು ಬದುಕುಳಿದಿದ್ದು ಪವಾಡವೇ ಸರಿ ಎಂದು ವೈದ್ಯರು ಉದ್ಘರಿಸಿದ್ದಾರೆ. 
 
ಮಗುವಿಗೆ ಗಂಭೀರ ಗಾಯಗಳಾಗಿಲ್ಲ. ಆಕೆಯ ಲಿವರ್ ಮತ್ತು ಕಿಡ್ನಿಗೆ ಆಂತರಿಕ ಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. 
 
ಘಟನೆ ನಡೆದ ಬಳಿಕ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದ. ಆದರೆ ಸ್ಥಳೀಯರು ಅದಕ್ಕೆ ಅವಕಾಶ ನೀಡಿಲ್ಲ. ಮಗುವಿನ ಚಿಕಿತ್ಸೆಯ ಎಲ್ಲ ವೆಚ್ಚಗಳನ್ನು ತಾನೇ ಬರಿಸುವುದಕ್ಕೆ ಕಾರು ಚಾಲಕ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಗುವಿನ ತಾಯಿ ಕಾರು ಚಾಲಕನ ವಿರುದ್ಧ ದೂರು ದಾಖಲಿಸಿಲ್ಲ.
 
ಸದ್ಯ ಮಗು ಆರೋಗ್ಯವಾಗಿದ್ದು, ಆಟವಾಡಿಕೊಂಡಿದೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ