ಕಾಂಗ್ರೆಸ್-ಜೆಡಿಎಸ್ ಕೈಗೆ ಬೆಂಗಳೂರನ್ನು ಆದರ್ಶ ನಗರವಾಗಿ ಮಾಡುವ ಹೊಣೆ

ಶುಕ್ರವಾರ, 11 ಸೆಪ್ಟಂಬರ್ 2015 (13:41 IST)
-ಗುಣವರ್ಧನ ಶೆಟ್ಟಿ 


ಕೊನೆಗೂ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಸಿಕ್ಕಿದೆ.  ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮಂಜುನಾಥ್ ರಾಜು ಅವರಿಗೆ 128 ಮತಗಳು ಬಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಮಂಜುನಾಥ್ ರೆಡ್ಡಿಗೆ 131 ಮತಗಳು ಸಿಕ್ಕಿ, ಮಂಜುನಾಥ್ ರೆಡ್ಡಿ ಮೇಯರ್ ಸ್ಥಾನಕ್ಕೆ  ಆಯ್ಕೆಯಾಗಿದ್ದಾರೆ.  ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು  ಗೆದ್ದ ಹುಮ್ಮಸ್ಸಿನಲ್ಲಿ ಅಂಕಿ, ಸಂಖ್ಯೆಯ ಲೆಕ್ಕಾಚಾರವನ್ನು ಮರೆತು, ಒಂದು ರೀತಿಯ ಭ್ರಮಾಲೋಕದಲ್ಲಿ ತೇಲಿತು. ಬಿಬಿಎಂಪಿ ಸಾಮ್ರಾಜ್ಯ ತಮ್ಮ ಕೈಗೆ ಸಿಕ್ಕಿತೆಂಬ ಭ್ರಮೆಯಲ್ಲಿ ಮುಳುಗಿತ್ತು.

ಆದರೆ ಪಕ್ಷೇತರ ಕಾರ್ಪೊರೇಟರುಗಳು ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸದೇ ದೂರ ಹೋದಾಗಲೇ ಬಿಜೆಪಿಗೆ ವಾಸ್ತವ ಸ್ಥಿತಿಯ ಅರಿವಾಗಿತ್ತು. ಪಕ್ಷೇತರರು ತಮಗೇ ಬೆಂಬಲ ನೀಡಬೇಕೇ ಹೊರತು ಬೇರಾರಿಗೂ ಬೆಂಬಲಿಸುವುದಿಲ್ಲವೆಂದು ಭಾವಿಸಿದ್ದ ಬಿಜೆಪಿ ಅವರ ಬಗ್ಗೆ ಒಂದು ರೀತಿಯ ಉದಾಸೀನ ಮನೋಭಾವ ಹೊಂದಿತ್ತು.

ಬಿಜೆಪಿಗೆ ಬೆಂಬಲವನ್ನು ನೀಡುವುದಾಗಿ ಕೆಲವು ಪಕ್ಷೇತರ ಸದಸ್ಯರು ಹೇಳಿದಾಗ ಬಿಜೆಪಿಯ ಕೆಲವು ಶಾಸಕರು ಮತ್ತು ಸಂಸದರು ಖಾರವಾಗಿ ಮಾತನಾಡಿದರು. ಇದು ಒಂದು ರೀತಿಯಲ್ಲಿ ಪಕ್ಷೇತರರ ಸಿಟ್ಟು ಕೆರಳಿಸುವಂತೆ ಮಾಡಿ ಅವರು ಕಾಂಗ್ರೆಸ್ ಕಡೆ ಮುಖಮಾಡಿದಾಗಲೇ ಬಿಬಿಎಂಪಿಯಲ್ಲಿ ಅಂಕಿ, ಅಂಶಗಳ ಲೆಕ್ಕಾಚಾರ ಆರಂಭವಾಗಿತ್ತು.

ಆದರೆ ಅಷ್ಟರಲ್ಲಿ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದ ಹಾಗಾಗಿತ್ತು.  ಬಿಜೆಪಿಯ ನಾಯಕರು ಕುಮಾರಸ್ವಾಮಿ ಕುರಿತು ಉದಾಸೀನವಾಗಿ ಮಾತನಾಡಿದ್ದಾರೆಂದು ಕುಮಾರಸ್ವಾಮಿ ಕೂಡ ಬಿಜೆಪಿಗೆ ಬೆಂಬಲಿಸದಿರಲು ನಿರ್ಧರಿಸಿದ್ದರು.

ಕೊನೆಗೂ ಬಿಬಿಎಂಪಿ ಅಧಿಕಾರ ಚುಕ್ಕಾಣಿ ಕಾಂಗ್ರೆಸ್-ಜೆಡಿಎಸ್ ಪಾಲಾಗುವ ಮೂಲಕ ಪುನಃ ಆಡಳಿತಪಕ್ಷಕ್ಕೆ ಅಧಿಕಾರ ದಕ್ಕಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯ ನೀರು, ವಿದ್ಯುತ್, ಕಸ ವಿಲೇವಾರಿ, ರಸ್ತೆ ಸಂಚಾರ ಮುಂತಾದ ಅನೇಕ ಸೌಲಭ್ಯಗಳಿಗೆ ಪ್ರಸಕ್ತ ಆಡಳಿತ ಗಮನಹರಿಸುವ ಮೂಲಕ ಮತ್ತು ಭ್ರಷ್ಟಾಚಾರ ಕಿಂಚಿತ್ತೂ ನುಸುಳದಂತೆ ನೋಡಿಕೊಳ್ಳುವ ಮೂಲಕ ಬೆಂಗಳೂರನ್ನು ದೇಶದಲ್ಲೇ ಒಂದು ಆದರ್ಶ ನಗರವಾಗಿ ಮಾಡುವ ಹೊಣೆಗಾರಿಕೆ ಅವರ ಮೇಲೆ ಬಿದ್ದಿದೆ. 

ವೆಬ್ದುನಿಯಾವನ್ನು ಓದಿ