ನವದೆಹಲಿ (ಜು.17): ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಆರೋಪಿಗಳಿಗೆ ಸುಪ್ರೀಂಕೋರ್ಟ್ನಿಂದ ಜಾಮೀನು ದೊರೆತರೂ ಆದೇಶದ ಪ್ರತಿಯು ಜೈಲಧಿಕಾರಿಗಳಿಗೆ ಸಿಗುವುದು ತಡವಾಗುವ ಕಾರಣ ಬಿಡುಗಡೆ ವಿಳಂಬವಾಗುವುದನ್ನು ತಪ್ಪಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
ಈ ಸಂಬಂಧ ಜೈಲಧಿಕಾರಿಗಳಿಗೆ ಜಾಮೀನು ಆದೇಶದ ಪ್ರತಿಯನ್ನು ಡಿಜಿಟಲ್ ರೂಪದಲ್ಲಿ ರವಾನಿಸುವ ವ್ಯವಸ್ಥೆಯನ್ನು ತಿಂಗಳೊಳಗೆ ಜಾರಿಗೆ ತರಲು ಸುಪ್ರೀಂಕೋರ್ಟ್ನ ಸೆಕ್ರೆಟರಿ ಜನರಲ್ಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ ಆದೇಶ ನೀಡಿದೆ. ಈ ಆದೇಶ ಜಾರಿಗೆ ಬಂದ ನಂತರ ಜೈಲಧಿಕಾರಿಗಳಿಗೆ ಇಂಟರ್ನೆಟ್ ಮುಖಾಂತರ ಡಿಜಿಟಲ್ ರೂಪದಲ್ಲಿ ಜಾಮೀನು ಆದೇಶದ ಪ್ರತಿ ಲಭಿಸಲಿದ್ದು, ತಕ್ಷಣ ಆರೋಪಿಗಳನ್ನು ಬಿಡುಗಡೆ ಮಾಡಬಹುದಾಗಿದೆ.
ದೇಶದ್ರೋಹ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ಗರಂ!
ಈ ಆದೇಶ ನೀಡುವ ವೇಳೆ ಮಹತ್ವದ ಅಭಿಪ್ರಾಯ ಪ್ರಕಟಿಸಿರುವ ನ್ಯಾ. ರಮಣ, ಈ ಡಿಜಿಟಲ್ ಯುಗದಲ್ಲಿ ನಾವು ಇನ್ನೂ ಪಾರಿವಾಳದ ಮೂಲಕ ಪತ್ರ ಸಾಗಿಸುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.
ಜಾಮೀನು ಆದೇಶವನ್ನು ಡಿಜಿಟಲ್ ರೂಪದಲ್ಲಿ ರವಾನಿಸಲು ಎಲ್ಲಾ ಜೈಲುಗಳಲ್ಲೂ ಇಂಟರ್ನೆಟ್ ಸಂಪರ್ಕ ಇದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಹಿರಿಯ ವಕೀಲ ದುಷ್ಯಂತ ದವೆ ಅವರನ್ನು ನೇಮಿಸಿದೆ. ಈ ವಿಷಯವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು