ಬಸ್‌ ನಿಲ್ದಾಣದಲ್ಲಿ ಕುಳಿತ ವ್ಯಕ್ತಿ ವಿದ್ಯುತ್ ಶಾಕ್‌ಗೆ ಬಲಿ !

ಸೋಮವಾರ, 16 ಮೇ 2022 (09:10 IST)
ಬೆಂಗಳೂರು: ಹೆಬ್ಬಾಳದ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
 
ಮೃತನ ಗುರುತು ಪತ್ತೆಯಾಗಿಲ್ಲ. ಆತನಿಗೆ 25ರಿಂದ 30 ವರ್ಷ ಇರಬಹುದು. ಶನಿವಾರ ರಾತ್ರಿ 9.30ರ ಸುಮಾರಿಗೆ ಜೋರಾಗಿ ಮಳೆ ಬರುತ್ತಿದ್ದಾಗ ಹೆಬ್ಬಾಳ ಬಸ್‌ ನಿಲ್ದಾಣದಲ್ಲಿ ನಾಲ್ವರು ಕುಳಿತಿದ್ದರು. ಈ ವೇಳೆ ನಿಲ್ದಾಣದ ಸೀಟಿನ ಹಿಂಭಾಗದಲ್ಲಿ ಅಳವಡಿಸಿದ್ದ ಜಾಹೀರಾತು ಫಲಕದ ಬೋರ್ಡ್‌ನಿಂದ ಸಣ್ಣದಾಗಿ ವಿದ್ಯುತ್‌ ಶಾಕ್‌ ಹೊಡೆದ ಅನುಭವ ಆಗಿದೆ. 
 
ಈ ವೇಳೆ ಮೂವರು ಬಸ್‌ ನಿಲ್ದಾಣದಿಂದ ಎದ್ದು ಹೊರಗೆ ಓಡಿ ಬಂದಿದ್ದಾರೆ. ಆಗ ಚಪ್ಪಲಿ ಕೆಳಗೆ ಬಿಟ್ಟು ಕುಳಿತಿದ್ದ ಅಪರಿಚಿತ ವ್ಯಕ್ತಿ ವಿದ್ಯುತ್‌ ಪ್ರವಹಿಸಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ.
ಈ ಬಗ್ಗೆ ಹೆಬ್ಬಾಳದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಡಿ.ಚೆನ್ನಕೇಶವ ಪ್ರತಿಕ್ರಿಯಿಸಿ, ಟೈಮ್ಸ್‌ ಇನೋವೇಟಿವ್‌ ಮೀಡಿಯಾ ಹೆಸರಿನ ಖಾಸಗಿ ಜಾಹೀರಾತು ಕಂಪನಿಯೊಂದು ಅಕ್ರಮವಾಗಿ ಬಸ್ಸು ನಿಲ್ದಾಣದ ಸಮೀಪದ ವಿದ್ಯುತ್‌ ಕಂಬದಿಂದ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದು ಬಸ್‌ ನಿಲ್ದಾಣದ ಸುತ್ತಲು ಜಾಹೀರಾತು ಫಲಕ ಅಳವಡಿಸಿತ್ತು. ಹಾಹೀರಾತು ಫಲಕದ ಮೆಟಲ್‌ ವೈರ್‌ ಸಂಪರ್ಕಕ್ಕೆ ಬಂದು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
 
ಜಾಹೀರಾತು ಫಲಕಕ್ಕೆ ನೀಡಿದ್ದ ವಿದ್ಯುತ್‌ ಸಂಪರ್ಕವನ್ನು 2020ರ ಡಿಸೆಂಬರ್‌ನಲ್ಲೇ ಸ್ಥಗಿತಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದು ಜಾಹೀರಾತು ಫಲಕ ಅಳವಡಿಸಿರುವುದು ಸ್ಥಳ ಪರಿಶೀಲನೆಯಿಂದ ತಿಳಿದುಬಂದಿದೆ. ಹೀಗಾಗಿ ವಿದ್ಯುತ್‌ ಅವಘಡ ಬೆಸ್ಕಾಂ ನಿರ್ಲಕ್ಷ್ಯದಿಂದ ಆಗಿಲ್ಲ. ಆಕ್ರಮ ವಿದ್ಯುತ್‌ ಸಂಪರ್ಕ ಪಡೆದಿರುವ ಖಾಸಗಿ ಜಾಹೀರಾತು ಸಂಸ್ಥೆ ವಿರುದ್ಧ ದೂರು ನೀಡಲಾಗುವುದು ಎಂದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ