ಮಕ್ಕಳನ್ನು ದತ್ತು ಪಡೆಯುವ ಮುನ್ನ ಎಚ್ಚರ! ಹಣ ಸುಲಿಗೆ ಮಾಡುತ್ತಿದ್ದ ತಾಯಿ, ಮಗ ಅರೆಸ್ಟ್!

ಸೋಮವಾರ, 12 ಜುಲೈ 2021 (14:12 IST)
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದತ್ತು ನಾಟಕವಾಡಿ ಹಣ ಸುಲಿಗೆ ಮಾಡುತ್ತಿದ್ದ ಲತಾ ಎಂಬಾಕೆಯನ್ನು ಈಗ ಪೊಲೀಸರ ವಶದಲ್ಲಿದ್ದಾಳೆ.
ತನಗೆ ಕ್ಯಾನ್ಸರ್ ಇದೆ. ಹಾಗಾಗಿ ಮಗನನ್ನು ಸಾಕಲು ಆಗುತ್ತಿಲ್ಲ ಎಂದು ಕತೆ ಕಟ್ಟಿ ತನ್ನ 9 ವರ್ಷದ ಮಗುವನ್ನು ದತ್ತು ನೀಡುವುದಾಗಿ ಲತಾ ನಂಬಿಸುತ್ತಿದ್ದಳು. ಮಗುವಿಗೆ ಗೊತ್ತಾಗದಂತೆ ಮನೆಗೆ ಬರುವಂತೆ ಸೂಚಿಸಿ, ನಾಪತ್ತೆ ನಾಟಕವಾಡಿ ದತ್ತು ಪಡೆದವರಿಂದ ಪದೇಪದೆ ಹಣ ವಸೂಲು ಮಾಡುತ್ತಿದ್ದಳು.
ಮಾನವೀಯ ದೃಷ್ಟಿಯಿಂದ ಕಸ್ತೂರಿ ಎಂಬುವವರ ಮನೆಯಲ್ಲಿ ಮಗುವನ್ನು ಬಿಟ್ಟು 4 ತಿಂಗಳ ನಂತರ ದತ್ತು ಸ್ವೀಕಾರ ಪ್ರಕ್ರಿಯೆ ಮುಗಿಸುವುದಾಗಿ ನಂಬಿಸಿದ್ದಳು.
ದತ್ತು ಪಡೆದ ಕಸ್ತೂರಿ ಮಗುವನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದರು. 3 ತಿಂಗಳ ಬಳಿಕ ಇದ್ದಕ್ಕಿದ್ದಂತೆ ಬಾಲಕ ದಾಖಲಾತಿ ಸಮೇತ ಕಣ್ಮರೆಯಾಗಿದ್ದ. ಕೂಡಲೇ ಕಸ್ತೂರಿ ಬಾಲಕ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರು.
ಇದೇ ವೇಳೆ ತಾಯಿ ಲತಾಗೂ ಸಹ ಬಾಲಕ ನಾಪತ್ತೆ ಆಗಿರುವ ವಿಷಯವನ್ನು ಕಸ್ತೂರಿ ಗಮನಕ್ಕೆ ತಂದಿದ್ದರು. ಕೆಲವು ದಿನಗಳ ಬಳಿಕ ಬಾಲಕ ಪತ್ತೆಯಾಗಿದ್ದು, ಬಾಲಕ ನಿಮಗೆ ವಾಪಸ್ ಕೊಡಬೇಕಾದರೆ 20 ಸಾವಿರ ಕೊಡಿ ಎಂದು ಮತ್ತೆ ಡಿಮ್ಯಾಂಡ್ ಮಾಡಿದ್ದಾಳೆ.
ಇದರಿಂದ ಅಸಮಾಧಾನಗೊಂಡ ಕಸ್ತೂರಿ ಪೊಲೀಸರ ಬಳಿ ದೂರು ನೀಡಿದ್ದು. ಪೊಲೀಸರು ವಿಚಾರಣೆ ನಡೆಸಿದಾಗ ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ ಲತಾ ಇದೇ ರೀತಿ ಮಗುವನ್ನು ದತ್ತು ನೀಡುವುದಾಗಿ ಮೂವರನ್ನು ವಂಚಿಸಿರುವುದು ಪತ್ತೆ ಹೆಚ್ಚಿದ್ದಾರೆ.
ಮಗುವನ್ನು ದತ್ತು ನೀಡಿ 4 ತಿಂಗಳ ಸಮಯ ಕೇಳುವುದು, 3 ತಿಂಗಳ ನಂತರ ಮಗ ಓಡಿ ಬರುವುದು. ನಾಪತ್ತೆ ನಾಟಕವಾಡಿ ದತ್ತು ಪಡೆಯುವ ಆಸಕ್ತರಿಂದ ಹಣ ಸುಲಿಗೆ ಮಾಡುವುದೇ ಈಕೆಯ ಕಾಯಕ. ಅಮ್ಮನ ಮಾತಿನಂತೆ ಬಾಲಕ ನಾಟಕವಾಡಿ ದಾಖಲೆ ಸಮೇತ ಮನೆಗೆ ವಾಪಸ್ ಬರುತ್ತಿದ್ದ. ಇದೀಗ ಅನ್ನಪೂರ್ಣೇಶ್ವರಿನಗರ ಪೊಲೀಸರು ತಾಯಿ ಮಗನನ್ನ ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ