ದಾದಿಯರ ಪ್ರತಿಭಟನೆಗೆ ಸಂಘದ ಮಾಜಿ ಪದಾಧಿಕಾರಿಗಳ ಕುಮ್ಮಕ್ಕು: ಅಪ್ಪಾಜಿಗೌಡ

ಗುರುವಾರ, 24 ಸೆಪ್ಟಂಬರ್ 2015 (16:27 IST)
ನೌಕರಿಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ನಗರದ ಕಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವರು ಪ್ರತಿಕ್ರಿಯಿಸಿದ್ದು, ಸಂಘದ ಒಳರಾಜಕೀಯಕ್ಕಾಗಿ ಆಸ್ಪತ್ರೆಯ ದಾದಿಯರು ಹಾಗೂ ವೈದ್ಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೂ ಕೂಡ ಉತ್ತಮ ರೀತಿಯಲ್ಲಿಯೇ ವೇತನ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು ವಿನಾಃ ಕಾರಣ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಈ ಪ್ರತಿಭಟನೆ ಹೀಗೆಯೇ ಮುಂದುವರಿದಲ್ಲಿ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು. 
 
ಇದೇ ವೇಳೆ, ಸಂಘದಲ್ಲಿ ಈ ಹಿಂದೆ ನಿರ್ದೇಶಕರಾಗಿ ಹಾಗೂ ಇತರೆ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಕೆಲವರು ವೈದ್ಯರು ಹಾಗೂ ದಾದಿಯರನ್ನು ಬಳಸಿಕೊಂಡು ಒಳ ರಾಜಕೀಯ ನಡೆಸುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಸಂಘಕ್ಕೆ ಆದಾಯವಿರುವುದೇ ಆಸ್ಪತ್ರೆಯಿಂದ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿಯುತ ಮಾತುಕತೆಗೆ ಮುಂದಾಗಲಿ. ಸಮಸ್ಯೆಗಳನ್ನು ಪರಿಹರಿಸಲು ಆಸ್ಪತ್ರೆಯ ಆಡಳಿತ ಮಂಡಳಿ ಸಿದ್ಧವಿದೆ ಎಂದರು. 
 
ಇನ್ನು ಕಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು ಕಳೆದ ಎರಡು ದಿನಗಳಿಂದಲೂ ಕೂಡ ಪ್ರತಿಭಟನೆ ನಡೆಸುತ್ತಿದ್ದು, ನಾವು ಕಳೆದ ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ನಮ್ಮನ್ನು ಖಾಯಂಗೊಳಿಸಿಕೊಳ್ಳದೆ ಇತರೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ನಮ್ಮನ್ನು ಕೈ ಬಿಡುವ ಹುನ್ನಾರವನ್ನು ಆಸ್ಪತ್ರೆ ಆಡಳಿತ ಮಂಡಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ನೌಕರಿಯನ್ನು ಖಾಯಂಗೊಳಿಸಿಕೊಡಬೇಕೆಂದು ಒತ್ತಾಯಿಸುತ್ತಾ ಪ್ರತಿಭಟನೆ ಮುದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ಪಾಜಿಗೌಡ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ