ಕೊಡಗಿನಲ್ಲಿ ಸ್ವರ್ಗವೇ ಧರೆಗಿಳಿದಿದೆ.. !

ಸೋಮವಾರ, 19 ಜುಲೈ 2021 (11:24 IST)
ಕೊಡಗು ಜಿಲ್ಲೆಯನ್ನು ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಲ್ಲಾ ಕರೆಯುತ್ತಾರೆ. ಅದೆಲ್ಲವನ್ನೂ ಸಾಕ್ಷೀಕರಿಸುವುದು ಇಲ್ಲಿನ ಜಲಧಾರೆಗಳು. ಕೂರ್ಗ್ ಅಂದ್ರೆ ಪ್ರವಾಸಿ ತಾಣಗಳ ತವರೂರು. ಇಲ್ಲಿನ ಪ್ರಾಕೃತಿಕ ಸಹಜ ಸೌಂದರ್ಯವನ್ನು ಸವಿಯಲು ಸಾವಿರಾರು ಜನರು ನಾಲ್ಕೈದು ದಿನಗಳು ಬಿಡುವು ಮಾಡಿಕೊಂಡು ಬರುತ್ತಾರೆ. ಅದರಲ್ಲೂ ಮಳೆಗಾಲ ಆರಂಭವಾಯಿತ್ತೆಂದರೆ, ಪ್ರತಿ ಬೆಟ್ಟಗುಡ್ಡದ ತಪ್ಪಲಿನಲ್ಲೂ ಜಲಕನ್ಯೆಯರು ಮೈದಳೆದು ವೈಯ್ಯಾರ ತೋರುತ್ತಾರೆ.


ಜಿಲ್ಲೆಯಲ್ಲಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಸಿರನ್ನೇ ಹೊದ್ದು ಮಲಗಿದ ಪರಿಸರದಲ್ಲಿ ಹುಟ್ಟಿ ಹಸಿರ ನಡುವಿನಿಂದಲೇ ಹಾಲ್ನೊರೆಯಂತೆ ಹರಿಯುವ ಜಲಪಾತಗಳ ನೋಡಲು ಎರಡು ಕಣ್ಣುಗಳು ಸಾಲದು. ನಿಧಾನವಾಗಿ ಹರಿಯುವ ಸೋಮವಾರಪೇಟೆ ತಾಲ್ಲೂಕಿನ ಮೇದೂರು ಜಲಪಾತ.

ರಸ್ತೆಯಲ್ಲಿ ನಿಂತರೆ ಒಂದೆಡೆ ಜೀಗುತ್ತಿರುವ ಜೀರುಂಡೆಗಳ ಶಬ್ಧದೊಂದಿಗೆ ಬೆರೆತು ಹೋದ ಜಲಧಾರೆಯ ನಿನಾದ. ಹೇಳಲು ಅಸಾಧ್ಯವಾದ ಅದೇನೋ ಕರ್ಣಾನಂದ. ರಭಸವಾಗಿ ಮೇಲಿಂದ ಜಿಗಿದು ವೇಗವಾಗಿ ಹರಿಯುವ ಅಬ್ಬಿಕೊಲ್ಲಿ ಜಲಪಾತ.
ಮಡಿಕೇರಿಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋದರೆ ಮದೆನಾಡಿನಿಂದ ಮುಂದೆ ಸಿಗುವುದೇ ಅಬ್ಬಿಕೊಲ್ಲಿ ಜಲಪಾತ. ಹೆದ್ದಾರಿಯಲ್ಲಿ ನಿಂತರೆ ಬಂಡೆಗಳನ್ನೇ ಸೀಳಿ ಬರುವಂತೆ ಭಾಸವಾಗುವ ಈ ಜಲಪಾತ ಎಂತವರನ್ನು ಮನಸೆಳೆದುಬಿಡುತ್ತದೆ.
ಹಾಲ್ನೊರೆಯಂತೆ ಹರಿಯುವ ನೀರಿನಿಂದ ಮಂಜಿನ ಹನಿಗಳ ರಾಶಿಯನ್ನು ಹೊಮ್ಮಿಸಿ ಮುಖಕ್ಕೆ ಸಿಂಚನ ಮಾಡುವ ಮಡಿಕೇರಿ ಸಮೀಪದ ಅಬ್ಬಿಜಲಪಾತ. ಇದು ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ವಾಹನಗಳ ಹಂಗಿಲ್ಲದೆ 500 ಮೀಟರ್ ಕಾಫಿ ತೋಟದ ಒಳಗೆ ಮೆಟ್ಟಿಲುಗಳ ಇಳಿಯುತ್ತಾ ಹೋದರೆ ಎದುರಾಗುವ ಅಬ್ಬಿಜಲಪಾತ ನಿಮ್ಮ ಮೈಮನಗಳನ್ನು ತೋಯ್ಸಿ ಬಿಡುತ್ತದೆ.
ಭೋರ್ಗರೆದು ಧುಮ್ಮಿಕ್ಕುವ ಜಲರಾಶಿಯಿಂದ ಹೊಮ್ಮಿದ ಮಂಜಿನ ರಾಶಿ ನಿಮ್ಮ ಮೈ ನೆನಸಿದರೆ, ಜಲಪಾತದ ಸೌಂದರ್ಯ ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಅಷ್ಟೇ ಏಕೆ ಅರ್ಧಚಂದ್ರಾಕೃತಿಯಲ್ಲಿ ನಿಮ್ಮನ್ನು ಚಿತ್ತಾಕರ್ಷಕಗೊಳಿಸುವ ಕುಶಾಲನಗರ ತಾಲ್ಲೂಕಿನ ಮಿನಿ ನಯಾಗರವೆಂದೆ ಪ್ರಸಿದ್ದಿಯಾಗಿರುವ ಚಿಕ್ಲಿಹೊಳೆ ಜಲಾಶಯ.
ಚಿಕ್ಕದಾದ ಜಲಾಶಯದ ಸುತ್ತಲೂ ಹೊದ್ದಿರುವ ವನರಾಶಿಯ ಹಸಿರು, ಜಲಾಶಯದ ನೀರಿನಲ್ಲಿ ಕರಗಿದಂತಾಗಿ ಇಡೀ ನೀರು ಹಸಿರಾಗಿರುವಂತೆ ತೋರುತ್ತದೆ. ಕೊಡಗಿನಲ್ಲಿ ಜಲಪಾತಗಳಿಗೇನು ಕಡಿಮೆ ಇಲ್ಲ. ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ.
ಇನ್ನು ಮಡಿಕೇರಿಯಿಂದ ಸಿದ್ಧಾಪುರ ರಸ್ತೆಯಲ್ಲಿ 12 ಕಿಲೋಮೀಟರ್ ಹೋದರೆ ಅಲ್ಲಿ ಸಿಗೋದೆ ಅಬ್ಯಾಲ ಫ್ಯಾಲ್ಸ್. ಜಲಪಾತದ ಎದುರಿಗೆ ನಿಂತು ಮುಗಿಲೆತ್ತರಕ್ಕೆ ತಲೆ ಎತ್ತಿ ನೋಡಿದರೆ ಅಲ್ಲಿಂದಲೇ ಸುರಿಯುವಂತೆ ಕಾಣುವ ಈ ಜಲರಾಶಿ ಅದೆಲ್ಲಿಂದ ಹರಿಯುತ್ತಿದೆಯೋ ಎಂಬ ಪ್ರಶ್ನೆ ಕಾಡುತ್ತದೆ.
ಇನ್ನು ಚೆಲಾವರ ಫಾಲ್ಸ್, ಇರ್ಪು ಫಾಲ್ಸ್. ಅಬ್ಬಾ ಒಂದಾ, ಎರಡ ಇಂತಹ ಹತ್ತಾರು ಜಲಪಾತಗಳು ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಜಿಟಿಜಿಟಿ ಮಳೆಯಲ್ಲಿ ನೆನೆಯುತ್ತಾ ಈ ಜಲಧಾರೆಗಳ ಸೌಂದರ್ಯವನ್ನು ನೀವು ಅನುಭವಿಸಲು ಕೊಡಗಿನಲ್ಲಿ ಪ್ರವಾಸ ಮಾಡಬೇಕೆಂದಿದ್ದರೆ, ಅದು ಮಳೆಗಾಲದಲ್ಲೇ ಮಾಡಿ. ಅಲ್ಲಿನ ಸ್ವರ್ಗ ಸೌಂದರ್ಯವನ್ನು ನೀವು ಕಣ್ತುಂಬಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ