ರೈಲಿನಡಿ ಬಗ್ಗಿ ಹೋಗಬೇಕು ಇಲ್ಲಿನ ಜನ!

ಶನಿವಾರ, 31 ಜುಲೈ 2021 (15:22 IST)
ಮಂಗಳೂರು ನಗರದ ಪಣಂಬೂರು ಪ್ರದೇಶದ ಜನರು ನಡೆದಾಡಲು ರಸ್ತೆ ಇಲ್ಲದೆ ರೈಲಿನಡಿಯೇ ನುಸುಳಿ ಓಡಾಡಬೇಕು ಎಂದರೆ ನೀವು ನಂಬಲೇಬೇಕು. ಹೌದು. ಸ್ಮಾರ್ಟ್ ಸಿಟಿಯಾಗಲಿರುವ ಮಂಗಳೂರಿನ ಈ ಪ್ರದೇಶದ ಜನರ ಪಾಡು ಹೇಳಿ ತೀರುವಂತಹದ್ದಲ್ಲ. 
ಪಣಂಬೂರು ಎನ್ಎಂಪಿಟಿಗೆ ಅದಿರು ಕೊಂಡೊಯ್ಯುವ ರೈಲು ಬಂದು ಈ ರಸ್ತೆಗಡ್ಡವಾಗಿ ನಿಂತಲ್ಲಿ ಈ ಪ್ರದೇಶದ ಜನರು ಮುಖ್ಯರಸ್ತೆಗೆ ಬರಬೇಕಾದಲ್ಲಿ ರೈಲಿನಡಿ ನುಸುಳಿಯೇ ಬರಬೇಕು. ಅದಿರು ಸರಬರಾಜು ಮಾಡಲು ಬರುವ ರೈಲು ದಿನಗಟ್ಟಲೆ, ಎರಡು ಮೂರು ದಿನಗಳ ಕಾಲವೂ ನಿಂತು ಲೋಡ್ ಮಾಡಲಾಗುತ್ತದೆ‌.
ರೈಲು ಇರುವಷ್ಟು ಕಾಲವೂ ಈ ಪ್ರದೇಶದ ಜನರ ಪಾಡು ಇದೇ ರೀತಿಯದ್ದಾಗಿರುತ್ತದೆ‌. ಪಣಂಬೂರಿನ ಈ ಪ್ರದೇಶದಲ್ಲಿ ಸಾಕಷ್ಟು ಮನೆಗಳಿದ್ದು, ಶಾಲೆಗಳು, ನೌಕರಿಗೆಂದು ಬರುವವರೂ ಇದ್ದಾರೆ. ಹಾಗಾಗಿ ಮಹಿಳೆಯರು, ಪುರುಷರು, ಮಕ್ಕಳೆನ್ನದೆ ಎಲ್ಲರೂ ರೈಲಿನಡಿ ತೂರಿಕೊಂಡು, ರೈಲಿನೆಡೆಯಲ್ಲಿ ಹತ್ತಿ ಇಳಿದು ಓಡಾಟ ಮಾಡಬೇಕಾಗುತ್ತೆ. 
ಇಲ್ಲಿನ ಪ್ರದೇಶದ ಜನರಿಗೆ ಮುಖ್ಯರಸ್ತೆಗೆ ಬರಲು ಇದೇ ಹತ್ತಿರದ ಮಾರ್ಗವಾಗಿದೆ‌. ಬೇರೆ ಬಳಸು ದಾರಿಯನ್ನು ಹಿಡಿದರೆ ಸುಮಾರು ಕಿ.ಮೀ.ಗಟ್ಟಲೆ ದೂರು ಕ್ರಮಿಸಬೇಕಾಗುತ್ತದೆ. ಆದ್ದರಿಂದ ಇಲ್ಲಿನ ಜನರಿಗೆ ರೈಲು ಬಂದು ನಿಂತಲ್ಲಿ ರೈಲಿನಡಿ ನುಸುಳಿ ಬರುವ ಪಾಡು ತಪ್ಪಿದ್ದಲ್ಲ. ಅಲ್ಲದೆ ರೈಲು ಸಂಚಾರ ಮಾಡುವಾಗಲೂ ಜನರು ಗಂಟೆಗಟ್ಟಲೆ ನಿಂತು ರೈಲು ಹೋಗುವವರೆಗೆ ಕಾಯಬೇಕಾಗುತ್ತದೆ‌. ಅಲ್ಲದೆ ಗೇಟ್ ಇಲ್ಲದ ಪರಿಣಾಮ ಇಲ್ಲಿನ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆಯಿದ್ದರೂ, ಯಾವ ರಾಜಕಾರಣಿಗಳೂ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ. 
ಈ ಪ್ರದೇಶದಲ್ಲಿ ಸರಿಯಾಗಿ ರೈಲ್ವೇ ಗೇಟ್ ಇರದ ಕಾರಣ, ಓವರ್ ಬ್ರಿಡ್ಜ್ ಕೂಡಾ ಇಲ್ಲದಿರುವ ಪರಿಣಾಮ ಜನರ ನಿತ್ಯ ಪಾಡು ಪಡುತ್ತಿದ್ದಾರೆ‌. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ