ಚಿನ್ನದ ಸರ ಕದ್ದ ಮಂಗನ ಮೇಲೆ ಎಫ್ಐಆರ್?

ಬುಧವಾರ, 15 ಜುಲೈ 2015 (11:28 IST)
ನಮ್ಮ ಬೆಂಗಳೂರು ನಗರ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಸರಗಳ್ಳರ ಕಾಟ ಹೆಚ್ಚಾಗುತ್ತಿದ್ದು, ಪೊಲೀಸರ ಪಾಲಿಗೆ ಇದು ದೊಡ್ಡ ತಲೆನೋವಾಗಿ ಕಾಡುತ್ತಿದೆ ಈ ಸಮಸ್ಯೆ . ಸರಗಳ್ಳರನ್ನೇ ಹಿಡಿಯುವುದು ಕಷ್ಟಸಾಧ್ಯವಾಗಿರುವಾಗ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಕೋತಿಯೊಂದು ತನ್ನ ಸರ ಕದ್ದಿದೆ. ಅದರ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾಳೆ. ಈ ಕುರಿತು ನಿರ್ಣಯಿಸಲಾಗದೇ ಪೊಲೀಸರೀಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
 
ಕಾನ್ಪುರದ ನಜೀರಬಾದ್ ಪೊಲೀಸ್ ಠಾಣೆಗೆ ಧಾವಿಸಿ ಬಂದ ಮಹಿಳೆಯೋರ್ವರು, "ಸರ್ ನನ್ನ ಚಿನ್ನದ ಸರ ಕಳುವಾಗಿದೆ. ದೂರು ದಾಖಲಿಸಿಕೊಳ್ಳಿ ಎಂದು ಹೇಳಿದ್ದಾಳೆ. ಸರಿ ಎಂದ ಪೊಲೀಸರು ಮಹಿಳೆಯ ಬಳಿ ಘಟನೆಯ ವಿವರ ಹೇಳಿದಾಗ "ಮಂಗವೊಂದು ನನ್ನ ಚಿನ್ನದ ಸರ ಕಿತ್ತುಕೊಂಡು ಓಡಿ ಹೋಗಿದೆ,ಎಫ್ಐಆರ್ ದಾಖಲಿಸಿ" ಎಂದಿದ್ದಾಳೆ ಆಕೆ.
 
ಈಗ ಬೆಸ್ತು ಬೀಳುವ ಸರದಿ ಪೊಲೀಸರದಾಗಿತ್ತು. 'ಮನುಷ್ಯರು ನಿಮ್ಮ ಸರವನ್ನು ಅಪಹರಿಸಿದ್ದರೆ ಎಫ್ಐಆರ್ ದಾಖಲಿಸಬಹುದಾಗಿತ್ತು. ಕೋತಿಯ ಮೇಲೆ ಹೇಗೆ ಪ್ರಕರಣವನ್ನು ದಾಖಲಿಸಲು ಸಾಧ್ಯ. ಯಾವ ಕೋತಿಯ ಮೇಲೆ ಪ್ರಕರಣ ದಾಖಲಿಸುವುದು?', ಎಂದು ನಜೀರಾಬಾದ್ ಠಾಣೆಯ ಇನ್ಸಪೆಕ್ಟರ್ ಅಖಿಲೇಶ್ ಗೌರ್ ಅಸಹಾಯಕತೆ ವ್ಯಕ್ತಪಡಿಸಿ ಆಕೆಯನ್ನು ವಾಪಸ್ ಕಳುಹಿಸಿದ್ದಾರೆ. 
 
ಅಷ್ಟಕ್ಕೂ ನಡೆದಿದ್ದಾದರೂ ಏನು?: ಕೌಸಲ್‍ಪುರಿ ನಿವಾಸಿಯಾದ ಉರ್ಮಿಳಾ ಸಕ್ಸೆನಾ ಕಳೆದ ಸೋಮವಾರ ದೇವಾಲಯಕ್ಕೆ ಹೋಗುತ್ತಿದ್ದಾಗ, ಕೋತಿಯೊಂದು ಓಡಿ ಬಂದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದಾಡಿತ್ತು.  ಪರಿಣಾಮ ಸರ ತುಂಡಾಗಿದ್ದು, ಅರ್ಧಭಾಗವನ್ನು ಎತ್ತಿಕೊಂಡು ಕೋತಿ ಪರಾರಿಯಾಗಿತ್ತು.
 
ಮಹಿಳೆಯ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸದರಾದರೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. "ಸಾರ್ವಜನಿಕರಿಗೆ ವಿಪರೀತ ಕಿರುಕುಳ ನೀಡುತ್ತಿರುವ ಕೋತಿಗಳನ್ನು ಸೆರೆ ಹಿಡಿಯುವಂತೆ ನಗರಾಡಳಿತಕ್ಕೆ ನಾವು ಮನವಿ ಮಾಡಿದ್ದೇವೆ", ಎಂದು ಅಖಿಲೇಶ್ ಗೌರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ