ಮಾನವೀಯ ನೆಲೆಗಟ್ಟಿನಲ್ಲಿ ಕೊರೊನಾ ನಿರ್ವಹಣೆ: ರಾಜಕೀಯವಿಲ್ಲ ಎಂದರು ಪ್ರಧಾನಿ ಮೋದಿ

ಮಂಗಳವಾರ, 20 ಜುಲೈ 2021 (20:01 IST)
ಹೊಸ ದಿಲ್ಲಿ: ಕೊರೊನಾ ವೈರಸ್ ವಿರುದ್ಧದ ಸಮರವು ಕೇಂದ್ರ ಸರ್ಕಾರಕ್ಕೆ ರಾಜಕೀಯ ವಿಷಯ ವಸ್ತುವಲ್ಲ, ಇದೊಂದು ಮಾನವೀಯತೆಯ ವಿಚಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 ಹೈಲೈಟ್ಸ್:
•             100 ವರ್ಷಗಳ ಬಳಿಕ ಇಂಥಾದ್ದೊಂದು ಮಹಾ ಸಾಂಕ್ರಾಮಿಕ ವಿಶ್ವಕ್ಕೆ ಅಪ್ಪಳಿಸಿದೆ
•             100 ವರ್ಷಗಳ ಹಿಂದೆ ಜನರು ಹಸಿವಿನಿಂದ ಸಾವನ್ನಪ್ಪಿದ್ದರು
•             ಕಾಂಗ್ರೆಸ್ ನೀತಿ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ
ಹೊಸ ದಿಲ್ಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆ ಬಳಿಕ ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ ಅವರು ಕೊರೊನಾ ವೈರಸ್ ವಿರುದ್ಧದ ಸಮರವನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕೆಂದು ಹೇಳಿದ್ದಾರೆ ಎಂದರು.
100 ವರ್ಷಗಳ ಬಳಿಕ ಇಂಥಾದ್ದೊಂದು ಮಹಾ ಸಾಂಕ್ರಾಮಿಕವು ವಿಶ್ವಕ್ಕೆ ಅಪ್ಪಳಿಸಿದೆ. 100 ವರ್ಷಗಳ ಹಿಂದೆ ಜನರು ಹಸಿವಿನಿಂದ ಸಾವನ್ನಪ್ಪಿದ್ದರು. ಆದ್ರೆ, ಇದೀಗ ಭಾರೀ ಸಂಖ್ಯೆಯ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದ್ದೇವೆ. ಯಾರೊಬ್ಬರೂ ಹಸಿವಿನಿಂದ ನರಳಬಾರದು ಅನ್ನೋದು ನಮ್ಮ ಧ್ಯೇಯ. ಹೀಗಾಗಿ, ಈ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಕೊರೊನಾ ವೈರಸ್ ನಿರ್ವಹಣೆ ವಿಚಾರವಾಗಿ ವಿರೋಧ ಪಕ್ಷಗಳ ನಿಲುವಿಗೂ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದರು ಎಂದು ಜೋಶಿ ತಿಳಿಸಿದರು. ಕಾಂಗ್ರೆಸ್ ಪಕ್ಷವು ಸಂಸತ್ ಕಲಾಪವನ್ನು ಸೂಕ್ತ ರೀತಿಯಲ್ಲಿ ನಡೆಯಲು ಬಿಡುತ್ತಿಲ್ಲ, ಕೊರೊನಾ ಲಸಿಕೆಯಿಂದ ಮೊದಲುಗೊಂಡು ಎಲ್ಲ ವಿಚಾರಗಳ ಸಂಬಂಧ ವಿನಾಕಾರಣ ತಗಾದೆ ತೆಗೆಯುತ್ತಿದೆ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದು, ಕೋವಿಡ್ ವಾರಿಯರ್ಸ್ಗಳಿಗೆ ಮೊದಲು ಲಸಿಕೆ ಸಿಗಬೇಕು ಎಂದೂ ಪ್ರಧಾನಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ