ಮತ್ತೆ ಆರಂಭವಾಯಿತು ರೆಸಾರ್ಟ್ ರಾಜಕಾರಣ: ಬಿಬಿಎಂಪಿ ಗದ್ದುಗೆ ಯಾರ ಕೊರಳಿಗೆ?

ಶನಿವಾರ, 29 ಆಗಸ್ಟ್ 2015 (18:55 IST)
-
ಬಿ. ಗುಣವರ್ಧನ ಶೆಟ್ಟಿ 
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿಬಿಎಂಪಿ ಗದ್ದುಗೆಗೆ ಗುದ್ದಾಟವು ಈಗ ಮತ್ತೆ ರೆಸಾರ್ಟ್ ಸಂಸ್ಕೃತಿಗೆ ಜೆಡಿಎಸ್ ಕಾರ್ಪೊರೇಟರ್‌ಗಳು ಜೋತುಬೀಳುವಂತೆ ಮಾಡಿದೆ. ಇದರ ಜತೆ ಅಧಿಕಾರ ಹಿಡಿಯಲು ರಾಜಕಾರಣದಲ್ಲಿ  ಆಜನ್ಮ ವೈರಿಯಾಗಿದ್ದವರು ಸ್ನೇಹಿತರಾಗುತ್ತಾರೆ, ಸ್ನೇಹಿತರು ವೈರಿಗಳಾಗುತ್ತಾರೆ ಎನ್ನುವುದನ್ನು ಬಿಬಿಬಿಎಂ ರಾಜಕಾರಣ ಮತ್ತೆ ಸಾಬೀತು ಮಾಡುತ್ತಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಜತೆ ಒಂದಾದರೆ ತಪ್ಪೇನು ಎಂದು ಜೆಡಿಎಸ್ ಜಮೀರ್ ಅಹ್ಮದ್ ಹೇಳಿದ್ದಾರೆ.

ಆದರೆ ಜೆಡಿಎಸ್  ಬಿಜೆಪಿ ಜತೆ ಕೈಜೋಡಿಸಿ  ರಾಜ್ಯದ ಅಧಿಕಾರ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡಾಗ ಬಿಜೆಪಿ ಕೋಮುವಾದಿ ಆಗಿರಲಿಲ್ಲವೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.   ಬಿಬಿಎಂಪಿ ಆಗಿರಲಿ ಅಥವಾ ರಾಜ್ಯದ ಅಧಿಕಾರ ಚುಕ್ಕಾಣಿಯೇ ಆಗಿರಲಿ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಸುಭದ್ರ ಆಡಳಿತ ನೀಡುವುದು ಅಸಂಭವ. ಇದಕ್ಕೆ ಹಿಂದಿನ ಕಿಚಡಿ ಸರ್ಕಾರಗಳ ಉದಾಹರಣೆಗಳು ಸಾಕಷ್ಟಿವೆ.  

ಮತದಾರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೇ ಇಕ್ಕಟ್ಟಿನಲ್ಲಿ ಸಿಕ್ಕಿಸುವ ಪ್ರಸಂಗ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಅವಾಂತರಗಳಿಂದ ಕಿಚಡಿ ಮೈತ್ರಿ ಪಕ್ಷಗಳು ನಿರ್ಮಾಣವಾಗಿ ಕಚ್ಚಾಟಗಳು ನಡೆದಿರುವ ಉದಾಹರಣೆಗಳು ಬೇಕಾದಷ್ಟಿವೆ. 

 ನಾವು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದರೂ ಅಂತರಂಗದಲ್ಲಿ ತೆರೆಮರೆಯ ಮಾತುಕತೆ ನಡೆಯುತ್ತಿದೆ.  ಅಪ್ಪ, ಮಕ್ಕಳ ರಾಜಕೀಯದಿಂದ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೇಲೆ ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಹಾವು, ಮುಂಗುಸಿಯ ದ್ವೇಷವಿತ್ತು. ಆದರೆ ಈಗ ಮತ್ತೆ ಬಿಬಿಎಂಪಿ ಅಧಿಕಾರ ಹಿಡಿಯುವುದಕ್ಕೆ ಅಪವಿತ್ರ ಮೈತ್ರಿಗೆ ಮುಂದಾಗಿದ್ದಾರೆ.    ಬುಧವಾರ ನಡೆದ ಬೆಳವಣಿಗೆಯಲ್ಲಿ 6 ಮಂದಿ ಪಕ್ಷೇತರ ಕಾರ್ಪೊರೇಟರ್‌ಗಳು ಬಿಜೆಪಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಆರು  ಪಕ್ಷೇತರ ಕಾರ್ಪೋರೇಟರ್‌ಗಳು ನಾಪತ್ತೆಯಾಗಿ ಕೇರಳದ ರೆಸಾರ್ಟ್‌ನಲ್ಲಿ ಅಡಗಿದ್ದಾರೆ. ಈಗ ಬಿಜೆಪಿ ಹೇಗಾದರೂ ಮಾಡಿ ಬಿಬಿಎಂಪಿ ಅಧಿಕಾರದ ಗದ್ದುಗೆ ಹಿಡಿಯಲು ಪ್ರತಿತಂತ್ರ ರೂಪಿಸುತ್ತಿದೆ. ಕೊನೆಗೆ ಯಾರಿಗೆ ಗದ್ದುಗೆ ದಕ್ಕುತ್ತದೋ, ಇನ್ನೆಷ್ಟು ರಂಪ, ರಾದ್ದಾಂತಗಳು ನಡೆಯುತ್ತದೋ  ಕಾದು ನೋಡಬೇಕು. 

ವೆಬ್ದುನಿಯಾವನ್ನು ಓದಿ