2005ರಲ್ಲೊಮ್ಮೆ ಚಿತ್ರಮಂದಿರ ನಿರ್ವಹಿಸಲು ಪ್ರದರ್ಶಕರು ಮುಂದೆ ಬಾರದ ಹಿನ್ನಲೆಯಲ್ಲಿ ಬೀಗ ಬಿದ್ದಿತ್ತು. ಬಳಿಕ 2009ರಲ್ಲಿ ನವೀಕರಣಗೊಂಡು ಮತ್ತೆ ಚಿತ್ರಮಂದಿರವನ್ನು ಗುತ್ತಿಗೆ ಪಡೆದಿದ್ದರು. ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಪ್ರದರ್ಶನ ಮಾಡಬೇಕು ಎಂಬ ಷರತ್ತಿನ ಮೇಲೆ ಕುಂಟುತ್ತಾ ಸಾಗುತ್ತಾ ಬಂದಿತ್ತು. ಆದರೆ ಈಗ ಚಿತ್ರಮಂದಿರಕ್ಕೆ ಮತ್ತೆ ಬೀಗಹಾಕಲಾಗಿದ್ದು, ಈಬಾರಿ ಶಾಶ್ವತವಾಗಿ ಮುಚ್ಚುವ ಲಕ್ಷಣಗಳು ಗೋಚರಿಸುತ್ತಿದೆ.
ಅದರೆ ಚಿತ್ರ ನಿರ್ಮಾಪಕ, ಪ್ರದರ್ಶಕ ಜಾಕ್ ಮಂಜು ಹೇಳುವ ಪ್ರಕಾರ, ಬಿಬಿಎಂಪಿ ಅಧಿಕಾರಿಗಳ ವರ್ತನೆಯೇ ಚಿತ್ರಮಂದಿರ ಮುಚ್ಚಲು ಕಾರಣ. ನನ್ನಂತೆ ಹಲವರು ನಿರ್ಮಾಪಕರು ಚಿತ್ರಮಂದಿರ ನಿರ್ವಹಿಸಲು ಸಿದ್ಧರಿದ್ದಾರೆ. ಕೇವಲ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತೇವೆ ಎಂದು ಮೊದಲೆ ಬರೆದುಕೊಡುತ್ತೇವೆ. ಆದರೆ ಚಿತ್ರಮಂದಿರ ಗುತ್ತಿಗೆ ಪಡೆಯುವ ಪ್ರತಿಕ್ರಿಯೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯನ್ನು ನಿರ್ವಹಿಸುವುದು, ಕಷ್ಟದ ಕೆಲಸ. ಏಕಗವಾಕ್ಷಿ ಪದ್ಧತಿ ಮೂಲಕ ಚಿತ್ರ ಮಂದಿರವನ್ನು ನಮಗೆ ನೀಡುವುದಾದರೆ ನಾವು ನಿರ್ವಹಿಸಲು ಸಿದ್ಧ ಎಂದು ಹೇಳುತ್ತಾರೆ.