ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ ಮೂಲೆಹೊಳೆ ತಪಾಸಣಾ ಕೇಂದ್ರಕ್ಕೆ ಆಗಮಿಸಿದಾಗ ಮಳೆ ಶುರುವಾಗಿದೆ. ಮಳೆಯ ನಡುವೆ ಕೇರಳದಿಂದ ಬಂದ ಪ್ರಯಾಣಿಕರನ್ನು ತಡೆದು ಡಿಎಚ್‌ಒ ಖುದ್ದು ತಪಾಸಣೆ ನಡೆಸಿ, ಕಾಡಂಚಿನ ಗ್ರಾಮದ ಮಕ್ಕಳ ಮೇಲೆ ನಿಗಾ ಇಡುವಂತೆ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಲಕ್ಷಣಗಳು: ಹಲವು ವರ್ಷಗಳಿಂದ ದೇಶಾದ್ಯಂತ ಆಗಾಗ್ಗೆ ಬಾಧಿಸುತ್ತಿರುವ ಚಿಕೂನ್‌ಗುನ್ಯಾ ರೀತಿಯ ಕೆಲವು ಲಕ್ಷಣಗಳು ಟೊಮೆಟೊ ಜ್ವರದಲ್ಲೂ ಕಾಣಿಸಿಕೊಂಡಿದೆ. ತೀವ್ರ ಜ್ವರ, ಇಡೀ ದೇಹದಲ್ಲಿ ನೋವು, ಕೀಲುಗಳಲ್ಲಿ ಊತ, ಅತಿಯಾದ ಆಯಾಸದಂತಹ ಲಕ್ಷಣಗಳನ್ನು ಗಮನಿಸಲಾಗಿದೆ. ಸೋಂಕಿಗೆ ಒಳಗಾಗಿರುವ ಮಕ್ಕಳ ಚರ್ಮದ ಮೇಲೆ ಗುಳ್ಳೆಗಳು ಎದ್ದಿರುವುದು, ಕೆರೆತ ಉಂಟಾಗಿದೆ. ಇದರೊಂದಿಗೆ ಕೆಮ್ಮು, ನೆಗಡಿ, ಹೊಟ್ಟೆನೋವು, ವಾಂತಿ ಅಥವಾ ಬೇಧಿ, ಹೊಟ್ಟೆತೊಳಸುವಿಕೆ, ಕೈಗಳು, ಮಂಡಿಗಳಲ್ಲಿ ಬಣ್ಣ ಬದಲಾವಣೆ ಉಂಟಾಗುವ ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ. ಈ ಟೊಮೆಟೊ ಜ್ವರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
ಆರೋಗ್ಯಾಧಿಕಾರಿಗಳು ಈ ಸೋಂಕಿನ ಕುರಿತು ತನಿಖೆ ಕೈಗೊಂಡಿದ್ದಾರೆ. ಕೇರಳದ ಕೊಲ್ಲಂ ಸೇರಿದಂತೆ ಹಲವು ಭಾಗಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಸೋಂಕಿತ ವ್ಯಕ್ತಿಯೊಂದಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಸೋಂಕು ಬಹುಬೇಗ ಹರಡುವುದರಿಂದ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡುವುದನ್ನು ಅನುಸರಿಸಲಾಗುತ್ತಿದೆ. ಜ್ವರದಿಂದಾಗುವ ಬಳಲಿಕೆಯ ಪರಿಣಾಮಗಳಿಂದ ಹೊರಬರಲು ರೋಗಿಗಳು ಅಗತ್ಯ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ವರದಿಗಳ ಪ್ರಕಾರ ಈ ಜ್ವರಕ್ಕೆ ನಿರ್ದಿಷ್ಟವಾದ ಔಷಧ ಇಲ್ಲ. ಸೂಕ್ತ ಆರೈಕೆ ಮತ್ತು ವಿಶ್ರಾಂತಿಯಿಂದ ರೋಗ ಗುಣಮುಖವಾಗುವುದು ಎಂದು ತಿಳಿದುಬಂದಿದೆ.