ವೋಟ್ ಫಾರ್ ಸೇಲ್, ಬೆಲೆ 10,000 ರೂ.

ಶುಕ್ರವಾರ, 21 ಆಗಸ್ಟ್ 2015 (18:11 IST)
--ಗುಣವರ್ಧನ ಶೆಟ್ಟಿ 
ಕ್ವಿಕರ್ ಡಾಟ್ ಕಾಂನಲ್ಲಿ ನನ್ನ ವೋಟಿನ ಬೆಲೆ 10000 ರೂ. ಎಂದು ತಿಳಿಸುವ ಮೂಲಕ ಡಾ. ಆನಂದ್ ಲಕ್ಷ್ಮಣ್ ಎಂಬುವರು ತಮ್ಮ ವೋಟನ್ನು ಮಾರಾಟಕ್ಕಿಟ್ಟಿದ್ದರು. ಮಧ್ಯಮವರ್ಗದ ಜನರೇಕೆ ತಮ್ಮ ಮತವನ್ನು ಮಾರಾಟಕ್ಕೆ ಇಡಬಾರದು ಎಂದು ಅವರು ಪ್ರಶ್ನಿಸಿದ್ದರು.  ನಾಳೆ ಬಿಬಿಎಂಪಿಯ 197 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದೆ. ಅಭ್ಯರ್ಥಿಗಳು ಕೋಟ್ಯಂತರ ರೂ. ಹಣವನ್ನು ಪ್ರಚಾರವೆಚ್ಚಕ್ಕೆ ನೀರಿನಂತೆ ಚೆಲ್ಲಿದ್ದಾರೆ. ನಮ್ಮ ಪಕ್ಷಕ್ಕೇ ಮತ ನೀಡಿ ಎಂದು ಮನೆ, ಮನೆಗೂ ತೆರಳಿ ಪ್ರಚಾರ ಮಾಡುವುದರಲ್ಲಿ ಪೈಪೋಟಿಗೆ ಇಳಿದಿದ್ದಾರೆ.

ಜನರು ಸಾಮಾನ್ಯ ಪರಿಸ್ಥಿತಿಯಲ್ಲಾದರೆ ಅವರಿಂದ ಬಡಾವಣೆಗೆ ಯಾವ ರೀತಿಯ ಲಾಭವಾಗಿದೆ, ಅವರ ಅರ್ಹತೆಯೇನು, ನಮ್ಮ ವಾರ್ಡ್ ಸುಧಾರಿಸುವ ಸಾಮರ್ಥ್ಯ ಅವರ ಕೈಲಿದೆಯಾ, ಅವರಿಂದ ವಾರ್ಡ್‌ಗೆ ಲಾಭವಾಗುತ್ತದೆಯಾ ಮುಂತಾದುವನ್ನು ಯೋಚಿಸಿ ಸಹಜವಾಗಿ ಅಂತಹವರಿಗೆ ಮತಹಾಕುತ್ತಾರೆ. ಆದರೆ ಈಗಿನ ಚುನಾವಣೆ ವೈಖರಿ ಸಂಪೂರ್ಣ ಬದಲಾಗಿದೆ. ಪಕ್ಷಗಳು  ಮತದಾರರಿಗೆ ಹಣ ಹಂಚಿಕೆಯಲ್ಲಿ ಪೈಪೋಟಿಗೆ ಬಿದ್ದಿವೆ. ಜನರೂ ಕೂಡ ಕೇವಲ ಹಣಕ್ಕಾಗಿ ತಮ್ಮ ಮತವನ್ನು ಮಾರಿಕೊಳ್ಳುವ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ಯೋಗ್ಯ ಅಭ್ಯರ್ಥಿಯನ್ನು ಆರಿಸುವ ಕನಸು ಕನಸಾಗಿಯೇ ಉಳಿಯುತ್ತದೆ.

ಹಣ ಕೊಟ್ಟು ಗೆದ್ದು ಬಂದ ಕಾರ್ಪೊರೇಟರ್ ಕಳೆದುಕೊಂಡ ಹಣದ ದುಪ್ಪಟ್ಟು ಸಂಪಾದನೆಗೆ ಇಳಿಯದೇ ಇರುವುದಿಲ್ಲ.  ಈಗಿನ ಚುನಾವಣೆಯಲ್ಲಿ ಆಗುತ್ತಿರುವುದೂ ಅದೇ ರೀತಿ. ಜನರು ತಮ್ಮ ಮತವನ್ನು ಸಾವಿರ,  2 ಸಾವಿರ ರೂ.ಗಳಿಗೆ ಮಾರಿಕೊಂಡು ಕೊನೆಗೆ ಗೆದ್ದುಬಂದ ಸದಸ್ಯ ವಾರ್ಡ್ ಅಭಿವೃದ್ಧಿ ಮಾಡುತ್ತಾರೆಂದು ನಿರೀಕ್ಷಿಸುವುದು ಹೇಗೆ ಸಾಧ್ಯ? ಚುನಾವಣಾಧಿಕಾರಿಗಳು ಇವೆಲ್ಲಾ ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಿರುವುದು, ಜನರು ಕೂಡ ತಾವು ಹಣ ತೆಗೆದುಕೊಂಡಿದ್ದರೂ ಏನೂ ನಡೆದೇ ಇಲ್ಲವೆಂಬಂತೆ ಸುಮ್ಮನಿರುವುದು, ಪಕ್ಷಗಳು ತಾವು ಹಣಕೊಟ್ಟಿದ್ದರೂ ಕೊಟ್ಟಿಲ್ಲವೆಂಬಂತೆ ಹೇಳುವುದು ಇವೆಲ್ಲಾ ನಮ್ಮ ಚುನಾವಣೆಗಳ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

 ವೋಟ್ ಫಾರ್ ಸೇಲ್ ಎಂದು ಹೇಳಿರುವ ಡಾ. ಆನಂದ್ ಲಕ್ಷ್ಮಣ್ ತಾವು ನಿಜವಾಗಿಯೂ ವೋಟನ್ನು ಮಾರಾಟಕ್ಕೆ ಇಟ್ಟಿಲ್ಲ.  ಪ್ರಸ್ತುತ ಅಭ್ಯರ್ಥಿಗಳು ಮತದಾರರಿಗೆ ನೋಟು ಹಂಚುತ್ತಿರುವ ವ್ಯವಸ್ಥೆಯನ್ನು ನೋಡಿ ಬೇಸರವಾಗಿ  ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ,ಪ್ರಾಮಾಣಿಕವಾಗಿ ಓಟು ಮಾಡುವಂತೆ ತಿಳಿಸಲು, ಹಣದ ಆಮಿಷಕ್ಕೆ ಒ ಳಗಾಗಿ ಕೆಟ್ಟ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಎಚ್ಚರಿಸಲು  ವೋಟ್ ಫಾರ್ ಸೇಲ್‌ಗೆ ಇಳಿದಿದ್ದಾಗಿ  ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ