ಅತ್ಯಂತ ಮೃದುವಾದ, ಬಾಯಿಗಿಟ್ಟರೆ ಕರಗುವಂತಹ ರುಚಿಕರವಾದ ಗುಲಾಬ್ ಜಾಮೂನ್ ಯಾರಿಗೆ ಇಷ್ಟ ಇಲ್ಲ ಹೇಳಿ?
ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು. ಆದರೂ ಜನರು ಮಾರುಕಟ್ಟೆಯಲ್ಲಿ ದೊರಕುವ ರೆಡಿಮೆಡ್ ಇನ್ಸ್ಟೆಂಟ್ ಮಿಕ್ಸರ್ಗಳಿಂದಲೇ ಜಾಮೂನ್ ತಯಾರಿಸುವುದು ಎಷ್ಟು ಬೇಸರ ಅಲ್ವಾ?
ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಗುಲಾಬ್ ಜಾಮೂನ್ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
* ಮೈದಾ – 1/2 ಕಪ್
* ತುರಿದ ಖೋವಾ- 1 ಕಪ್ (200-225 ಗ್ರಾಂ)
* ಅಡುಗೆ ಸೋಡ- 1/8 ಟೀಸ್ಪೂನ್
* ತುಪ್ಪ/ಎಣ್ಣೆ- ಡೀಪ್ ಫ್ರೈಗೆ ಬೇಕಾಗುವಷ್ಟು
* ಹಸಿರು ಏಲಕ್ಕಿ – 3-4
* ಕೇಸರಿ ಎಳೆಗಳು – 8-10
* ಸಕ್ಕರೆ – ಒಂದೂವರೆ ಕಪ್
* ನೀರು – ಎರಡೂವರೆ ಕಪ್
ಮಾಡುವ ವಿಧಾನ
* ಮೊದಲು ಸಕ್ಕರೆ ಪಾಕ ತಯಾರಿಸಲು ಆಳವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ನೀರಿನೊಂದಿಗೆ ಸಕ್ಕರೆ, ಏಲಕ್ಕಿ ಹಾಗೂ ಕೇಸರಿ ಎಳೆಗಳನ್ನು ಹಾಕಿ ಕುದಿಸಿ. ಬಳಿಕ 10-12 ನಿಮಿಷಗಳವರೆಗೆ ಪಾಕ ಜಿಗುಟಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ, ಪಕ್ಕಕ್ಕಿಡಿ.
* ಜಾಮೂನ್ ಮಿಶ್ರಣ ತಯಾರಿಸಲು ತುರಿದ ಖೋವಾಗೆ ಅಡುಗೆ ಸೋಡಾ, ಜರಡಿ ಹಿಡಿದ ಮೈದಾ ಸೇರಿಸಿ, ಹಿಟ್ಟಿನಂತೆ ನುಣ್ಣಗೆ ಮಿಶ್ರಣ ಮಾಡಿ. ಅಂಟು ಬರಲು ಸ್ವಲ್ಪ ಹಾಲು ಬಳಸಬಹುದು.
* ಈ ಹಿಟ್ಟನ್ನು 20 ನಿಮಿಷಗಳ ಕಾಲ ಪಕ್ಕಕ್ಕೆ ಇಟ್ಟು, ಬಳಿಕ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಕೈಗೆ ಸ್ವಲ್ಪ ತುಪ್ಪ ಸವರಿ ಉಂಡೆ ಕಟ್ಟುವುದರಿಂದ ಉಂಡೆ ನಯವಾಗಿ ಮೂಡಿ ಬರುತ್ತದೆ. ಉಂಡೆಯಲ್ಲಿ ಬಿರುಕು ಬೀಳದಂತೆ ಎಚ್ಚರವಹಿಸಿ.
* ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಉಂಡೆಗಳನ್ನು ಹಾಕಿ ಗಾಢ ಕಂದು ಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ.
* ಕಾದ ಉಂಡೆಗಳನ್ನು ಎಣ್ಣೆಯಿಂದ ತೆಗೆದು 5 ನಿಮಿಷ ಆರಲು ಬಿಡಿ.
* ಬಿಸಿ ಸ್ವಲ್ಪ ಆರಿದ ಬಳಿಕ ಸಕ್ಕರೆ ಪಾಕಕ್ಕೆ ಅವುಗಳನ್ನು ಹಾಕಿ, 2 ಗಂಟೆ ಹೀರಿಕೊಳ್ಳಲು ಬಿಡಿ.