ಚಳಿಗಾಲದಲ್ಲಿ ಮೂಲಂಗಿಯನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಅನೇಕ ಬಾರಿ ಮೂಲಂಗಿಯನ್ನು ಕೊಳ್ಳುವಾಗ ಅದರ ಎಲೆಗಳನ್ನು ತೆಗೆದುಕೊಳ್ಳುವುದಿಲ್ಲ.
ಒಂದೊಮ್ಮೆ ಎಲೆಗಳನ್ನು ತಂದರು ಅದನ್ನು ಉಪಯೋಗಿಸುವುದಿಲ್ಲ. ಆದರೆ ಮೂಲಂಗಿ ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಉತ್ತಮ ಆರೋಗ್ಯಕ್ಕಾಗಿ ಜ್ಯೂಸ್ ರೂಪದಲ್ಲಿ ಮೂಲಂಗಿ ಎಲೆಗಳನ್ನು ಸೇವಿಸಬಹುದು. ಮೂಲಂಗಿ ಎಲೆಗಳು ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಲೋರಿನ್, ಸೋಡಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ.
ಈ ಪೋಷಕಾಂಶಗಳು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾದರೆ ಮೂಲಂಗಿ ಎಲೆಗಳ ಜ್ಯೂಸ್ ತಯಾರಿಸುವುದು ಹೇಗೆ? ಇದರಿಂದಾಗುವ ಪ್ರಯೋಜನಗಳಾವುವು ಎಂದು ತಿಳಿಯುವುದು ಸೂಕ್ತ.
ಮೂಲಂಗಿ ಎಲೆಯ ಉಪಯೋಗಗಳು
ಜೀರ್ಣಕ್ರಿಯೆ
ಮೂಲಂಗಿ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ. ಇದು ಪ್ರತಿಯೊಬ್ಬರ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸಿದರೆ ಜೀರ್ಣಕ್ರಿಯೆಯ ಸಮಸ್ಯೆಯನ್ನು ನಿವಾರಿಸಬಹುದು.
ಬೊಜ್ಜು ಕಡಿಮೆಯಾಗುತ್ತದೆ
ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಮೂಲಂಗಿ ಎಲೆ ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ. ಹೌದು, ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಡಿಮೆ ಮಾಡಬಹುದು.
ರಕ್ತದೊತ್ತಡ ನಿವಾರಣೆ
ರಕ್ತದೊತ್ತಡದ ಸಮಸ್ಯೆ ಇದ್ದರೆ, ಅದರಲ್ಲೂ ಕಡಿಮೆ ರಕ್ತದೊತ್ತಡ ರೋಗಿಗಳಿಗೆ ಮೂಲಂಗಿ ಎಲೆಗಳ ಜ್ಯೂಸ್ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮೂಲಂಗಿ ಎಲೆಗಳು ಉತ್ತಮ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತವೆ. ಇದು ದೇಹದಲ್ಲಿ ಉಪ್ಪಿನ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ.
ಜ್ಯೂಸ್ ಹೇಗೆ ತಯಾರಿಸುವುದು?
ಮೂಲಂಗಿ ಎಲೆಗಳ ಜ್ಯೂಸ್ ಮಾಡಲು, ಮೊದಲು ತಾಜಾ ಮೂಲಂಗಿ ಎಲೆಗಳು ಬೇಕಾಗುತ್ತವೆ. ಇದರ ನಂತರ ಮೂಲಂಗಿ ಎಲೆಗಳನ್ನು ಶುದ್ಧ ನೀರಿನಿಂದ 2-3 ಬಾರಿ ಚೆನ್ನಾಗಿ ತೊಳೆಯಿರಿ. ಬಳಿಕ ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನಂತರ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು, ಚಿಟಿಕೆ ಕರಿಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿದರೆ ಮೂಲಂಗಿ ಎಲೆಗಳ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.