ಸಕ್ಕರೆ ಕಾಯಿಲೆಯ ಸಮಸ್ಯೆಗಳನ್ನು ತಪ್ಪಿಸುವ ಮಾರ್ಗಗಳು...

ಗುರುವಾರ, 7 ಜೂನ್ 2018 (14:44 IST)
ಇತ್ತೀಚೆಗೆ ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆಯು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಸುಮಾರು 40 ವರ್ಷ ಮೇಲ್ಪಟ್ಟವರಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಸಕ್ಕರೆ ಕಾಯಿಲೆ ಬಂತೆಂದರೆ ಜೊತೆಯಲ್ಲೇ ಹೃದಯದ ಸಮಸ್ಯೆಯನ್ನೂ ಹೊತ್ತು ತರುತ್ತದೆ.

ಆದರೆ ಸಕ್ಕರೆ ಕಾಯಿಲೆ ಬಂತೆಂದು ಭಯಪಡಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಸಾಕು. ಅದಕ್ಕಾಗಿ ಏನೇನು ಮಾಡಬಹುದು ಎಂಬುದನ್ನು ಈ ಕೆಳಗಿನ ಸಲಹೆಗಳನ್ನು ಓದಿ ತಿಳಿದುಕೊಳ್ಳಿ.
 
* ದೇಹದ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳುವಿಕೆಯು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ವೈದ್ಯರು, ಆಹಾರ ಪದ್ಧತಿ ಮತ್ತು ಫಿಟ್ನೆಸ್ ತರಬೇತಿದಾರರ ಸಹಾಯದೊಂದಿಗೆ ನೀವು ಈ ಯೋಜನೆಯನ್ನು ಮಾಡಬಹುದು.
 
* 2 ರಿಂದ 3 ತಿಂಗಳುಗಳಿಗೆ ಒಮ್ಮೆ A1c ರಕ್ತ ಪರೀಕ್ಷೆಗಳನ್ನು ಮಾಡಿಸುತ್ತಿರಿ. ಇದು ನಿಮ್ಮ ರಕ್ತದಲ್ಲಿನ ಸರಾಸರಿ ಸಕ್ಕರೆಯ ಪ್ರಮಾಣವನ್ನು ತಿಳಿಸುತ್ತದೆ. ನೀವು ಎಷ್ಟು ಬಾರಿ A1c ರಕ್ತ ಪರೀಕ್ಷೆಗಳನ್ನು ಮಾಡಿಸಬೇಕೆಂದು ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.
 
* ನಿಮ್ಮ ರಕ್ತದ ಒತ್ತಡ ಮತ್ತು ಕೊಲೆಸ್ಟ್ಟಾಲ್ ಅನ್ನು ನಿಯಂತ್ರಣದಲ್ಲಿರಿಸಿ. ಸಕ್ಕರೆ ಕಾಯಿಲೆಯು ಸಾಮಾನ್ಯವಾಗಿ ಹೃದಯದ ಸಮಸ್ಯೆಯನ್ನುಂಟುಮಾಡುತ್ತದೆ. ಆದ್ದರಿಂದ ನಿಮ್ಮ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಮೇಲೆ ನಿಗಾವಹಿಸಬೇಕಾಗುತ್ತದೆ. ನಿಮ್ಮ ವೈದ್ಯರಲ್ಲಿ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಂಡು ಅವರು ಶಿಫಾರಸು ಮಾಡಿದಂತೆ ಔಷಧಗಳನ್ನು ತೆಗೆದುಕೊಳ್ಳಿ.
 
* ಯಾವಾಗಲೂ ಚಟುವಟಿಕೆಯಿಂದಿರಿ. ನಿಯಮಿತವಾದ ವ್ಯಾಯಾಮವು ಆರೋಗ್ಯಕರ ದೇಹದ ತೂಕವನ್ನು ತಲುಪಲು ಅಥವಾ ನಿರ್ವಹಿಸಲು ಸಹಾಯ ಮಾಡುತ್ತದೆ. ವಾಕಿಂಗ್, ನೃತ್ಯ, ಕಡಿಮೆ ಪ್ರಮಾಣದ ಏರೋಬಿಕ್ಸ್ ಮತ್ತು ಜಾಗಿಂಗ್ ಅನ್ನು ಪ್ರಯತ್ನಿಸಿ. ನೀವು ಇದುವರೆಗೆ ಯಾವುದೇ ಚಟುವಟಿಕೆಗಳನ್ನು ಮಾಡಿರದಿದ್ದರೆ ನಿಧಾನವಾಗಿ ಪ್ರಾರಂಭಿಸಿ.
 
* ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಸಕ್ಕರೆ ಕಾಯಿಲೆಯಿರುವವರಿಗೆ ಮಾನಸಿಕ ಒತ್ತಡದ ಸಮಸ್ಯೆಯಿದ್ದರೆ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಏರಿಸುವ ಸಾಧ್ಯತೆಗಳಿರುತ್ತವೆ. 15 ರಿಂದ 20 ನಿಮಿಷಗಳ ಕಾಲ ಮೌನವಾಗಿ ಕುಳಿತುಕೊಳ್ಳುವುದು, ಧ್ಯಾನವನ್ನು ಮಾಡುವುದು ಮತ್ತು ಯೋಗಾಭ್ಯಾಸದ ಸಹಾಯದಿಂದ ನೀವು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.
 
* ದಿನದಲ್ಲಿ ಎರಡು ಬಾರಿಯಾದರೂ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಪರಿಶೀಲಿಸುತ್ತಿರಿ. ಅದು ವೈದ್ಯರು ಸೂಚಿಸಿರುವ ಪ್ರಮಾಣದಲ್ಲಿದೆಯೇ ಎನ್ನುವುದನ್ನು ನೋಡಿ ಅದನ್ನು ಬರೆದಿಟ್ಟುಕೊಳ್ಳಿ. ಇದು ನಿಮ್ಮ ಆರೋಗ್ಯದಲ್ಲಿನ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.
 
* ನೀವು ಎಷ್ಟು ಕಾರ್ಬೋಹೈಡ್ರೇಟ್ ಸೇವಿಸಿದ್ದೀರಿ ಎನ್ನುವುದನ್ನು ಟ್ರ್ಯಾಕ್ ಮಾಡಿ. ಆಹಾರದಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ಬೀನ್ಸ್ ಮತ್ತು ಧಾನ್ಯಗಳಂತಹ ಉತ್ತಮ-ಫೈಬರ್ ಕಾರ್ಬೋಹೈಡ್ರೇಟ್ ಅನ್ನು ಆರಿಸಿಕೊಳ್ಳಿ. ನೀವು ದಿನಕ್ಕೆ ಎಷ್ಟು ಬಾರಿ ತಿನ್ನುತ್ತೀರಿ ಮತ್ತು ಎಷ್ಟು ಬಾರಿ ಅದರಲ್ಲಿ ಕಾರ್ಬೋಹೈಡ್ರೇಟ್ ಹೊಂದಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ಕಾರ್ಬೋಹೈಡ್ರೇಟ್‌ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
 
* ನಿಮ್ಮ ವೈದ್ಯರ ಬಳಿ ವರ್ಷಕ್ಕೆ ಒಮ್ಮೆಯಾದರೂ ದೇಹದ ಸಂಪೂರ್ಣ ತಪಾಸಣೆಯನ್ನು ಮಾಡಿಸಿಕೊಳ್ಳಿ. ನಿಮ್ಮ ವೈದ್ಯರಲ್ಲಿ ಆಗ ನೀವು ಹೆಚ್ಚಾಗಿ ಮಾತನಾಡಬಹುದು. ವರ್ಷಕ್ಕೊಮ್ಮೆ ಸಂಪೂರ್ಣ ತಪಾಸಣೆಯನ್ನು ಮಾಡಿಸಿಕೊಂಡರೆ ಅದರಲ್ಲಿ ಕಣ್ಣು, ರಕ್ತದೊತ್ತಡ ಮತ್ತು ಪಾದದ ಪರೀಕ್ಷೆಯನ್ನು ಮಾಡುವುದರೊಂದಿಗೆ ಇತರ ಸಮಸ್ಯೆಗಳಾದ ಮೂತ್ರಪಿಂಡದ ಹಾನಿ, ನರದ ಹಾನಿ ಮತ್ತು ಹೃದಯದ ಸಮಸ್ಯೆಗಳನ್ನು ಪರೀಕ್ಷಿಸುತ್ತಾರೆ.
 
ಈ ಮೇಲಿನ ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮಗೆ ಸಕ್ಕರೆ ಕಾಯಿಲೆ ಇದ್ದರೂ ನೆಮ್ಮದಿಯಾಗಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ