ಬೆಂಗಳೂರು: ಹೆರಿಗೆ ನೋವು ಎನ್ನುವುದು ಹೆಣ್ಣಿಗೆ ಮರುಹುಟ್ಟು ಇದ್ದಂತೆ. ಅಂತಹಾ ನೋವನ್ನು ತಡೆದುಕೊಳ್ಳುವಕ್ಕೇ ಆಕೆ ಜೀವನದಲ್ಲಿ ಗಟ್ಟಿಯಾಗುತ್ತಾಳೆ. ನಾರ್ಮಲ್ ಡೆಲಿವರಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಹಾಗಾದರೆ ನಾರ್ಮಲ್ ಡೆಲಿವರಿಯಾಗಲು ಕೆಲವು ಟಿಪ್ಸ್ ಇಲ್ಲಿದೆ ನೋಡಿ.
ನಿಮ್ಮ ದೇಹದ ಮೇಲೆ ನಂಬಿಕೆಯಿರಲಿ
ನಿಮ್ಮ ದೇಹ ಒಂದು ಮಗುವನ್ನು ಹೊತ್ತು, ಹೆರುವುದಕ್ಕೆ ಸಶಕ್ತವಾಗಿದೆ ಎಂಬ ನಂಬಿಕೆಯಿರಲಿ. ಗಂಭೀರ ಸಮಸ್ಯೆಗಳಿಲ್ಲದೇ ಹೋದರೆ ನಿಮಗೆ ನಾರ್ಮಲ್ ಡೆಲಿವರಿ ಸಾಧ್ಯ. ನಾರ್ಮಲ್ ಡೆಲಿವರಿ ಸಂದರ್ಭದಲ್ಲಿ ಉಂಟಾಗುವ ನೋವನ್ನು ತಡೆದುಕೊಳ್ಳಲು ಆ ಸಂದರ್ಭದಲ್ಲಿ ಮೆದುಳು ಒಂದು ನೋವು ನಿವಾರಕವನ್ನು ಬಿಡುಗಡೆಗೊಳಿಸುತ್ತದೆ.
ರಿಲ್ಯಾಕ್ಸಿಂಗ್
ನಾರ್ಮಲ್ ಡೆಲಿವರಿಗೆ ಮಾನಸಿಕವಾಗಿ ಸಿದ್ಧರಾಗಿ. ಗರ್ಭಿಣಿಯಾಗಿದ್ದಾಗ ಕೆಲವು ಸುಲಭದ ವ್ಯಾಯಾಮಗಳು, ಮನಸ್ಸು ಗಟ್ಟಿಗೊಳಿಸುವಂತಹ ಉಸಿರಾಟದ ಟೆಕ್ನಿಕ್ ಗಳನ್ನು ಮಾಡುತ್ತಿರಿ. ಒತ್ತಡ ನಿವಾರಿಸಲು ಸಂಗೀತ ಕೇಳುವುದು ಹಾಗೂ ಇನ್ನಿತರ ನಿಮ್ಮ ಇಷ್ಟದ ಕೆಲಸ ಮಾಡುತ್ತಿರಿ.
ಸೂಕ್ತ ವೈದ್ಯರು
ಇದು ತುಂಬಾ ಮುಖ್ಯ. ನೀವು ಎಂತಹ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರಲ್ಲಿ ನಿಮ್ಮ ಸುಸ್ರೂತ್ರ ಹೆರಿಗೆಯ ಗುಟ್ಟು ಅಡಗಿದೆ. ಏನೇ ಆತಂಕಗಳಿದ್ದರೆ ವೈದ್ಯರೊಂದಿಗೆ ಹಂಚಿಕೊಳ್ಳಿ.
ತೂಕ
ಗರ್ಭಿಣಿಯಾಗಿದ್ದಾಗ ಸುತ್ತಲಿದ್ದವರೆಲ್ಲರೂ ಬೇಕಾಬೇಕಾದ್ದನ್ನೆಲ್ಲಾ ಮಾಡಿಕೊಡುವವರೇ. ಹಾಗಂತ ಸಿಕ್ಕಾಪಟ್ಟೆ ತಿಂದು ಮೈ ಊದಿಸಿಕೊಳ್ಳಬೇಡಿ. ಹೆಚ್ಚು ಫೈಬರ್ ಅಂಶವಿರುವ ಆಹಾರಗಳು, ಹಣ್ಣು ಹಂಪಲುಗಳನ್ನು ಸೇವಿಸಿ. ತೂಕ ಹೆಚ್ಚಿಸಿಕೊಂಡರೆ ಹೆರಿಗೆಯೂ ಕಷ್ಟ.
ನೀರು
ಗರ್ಭಿಣಿಯಾಗಿದ್ದಾಗಲೇ ಆದಷ್ಟು ನೀರು ಕುಡಿಯಬೇಕು. ನೀರು ಹೆಚ್ಚು ಸೇವಿಸಿದಷ್ಟು ನಿಮ್ಮ ದೇಹ ನಿರ್ಜಲೀಕರಣಕ್ಕೊಳಗಾಗುವುದಿಲ್ಲ. ಇದರಿಂದ ಮಲಬದ್ಧತೆಯಂತಹ ಸಮಸ್ಯೆಗಳೂ ಇರುವುದಿಲ್ಲ. ಪ್ರತಿ ನಿತ್ಯ ಕನಿಷ್ಠ 10 ಲೋಟ ನೀರು ಕುಡಿಯಿರಿ.
ಆರೋಗ್ಯವಾಗಿರಿ
ಆದಷ್ಟು ಆರೋಗ್ಯವಾಗಿರಿ. ಆದಷ್ಟು ಆರೋಗ್ಯವಾಗಿದ್ದರೆ, ಹೆರಿಗೆಯೂ ಸುಲಭವಾಗಿರುತ್ತದೆ. ಸರಳ ವ್ಯಾಯಾಮ. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರೆ, ಆರೋಗ್ಯವಾಗಿರುತ್ತೀರಿ.