ಛಿದ್ರವಾಗುವ ಮುನ್ನ ಭದ್ರವಾಗೋಣ

ರಾಕೇಶ್ ನಡಜಾರು
WD
ಇವತ್ತಿಗೂ ನೆನಪಿದೆ. ಯಾವತ್ತಿಗೂ ನೆನಪಿರುತ್ತದೆ. ಅಗಸ್ಟ್ 15ರ ಆ ಸಂಭ್ರಮ. ತ್ರಿವರ್ಣ ಧ್ವಜ ಗಾಳಿ ಸೀಳಿ ಕುಣಿಯುವಾಗ ಮೇರೆ ಮೀರಿ ಏರೋ ತೆರೆಗಳ ತರಹ ಕುಣಿದ ಆ ಕ್ಷಣ.

ಅದೆಷ್ಟೋ ಪ್ರೀತಿ, ಉತ್ಸಾಹ, ಕನಸು, ಹೇಳ(ಬರೆಯ)ಲಾಗದ ಅವ್ಯಕ್ತ ಭಾವ, ಈ ನನ್ನ ತಾಯಿಭೂಮಿಗೆ ಮರುಹುಟ್ಟು ನೀಡಿದ ಆ ದಿನದ ಬಗ್ಗೆ. ಅದಕ್ಕಾಗಿ ಇದ್ದದ್ದನ್ನೆಲ್ಲ ತ್ಯಾಗ ಮಾಡಿದ, ತ್ಯಾಗ ಮಾಡಲು ಸಿದ್ಧರಾಗಿದ್ದ ಆ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವಾಗ ಅದೆಂಥ ಪುಳಕ. ಹಿರಿಯರ ಭಾಷಣದಲ್ಲಿ ಹೋರಾಟಗಾರರ ಬಲಿದಾನದ ತುಣುಕುಗಳನ್ನು ಆಲಿಸಿದಾಗ ಕಣ್ಣಂಚಿನಲ್ಲಿ ಜಿನುಗುತ್ತಿದ್ದ ತುಂತುರು....

ಈ ಪುಟ್ಟ ಎದೆಯೊಳಗೆ ಹೆಡೆಯೆತ್ತುತ್ತಿದ್ದ ನಾನು ಈ ದೇಶಕ್ಕಾಗಿ ಏನನ್ನಾದರೂ ಮಾಡಲೇಬೇಕು ಎಂಬ ತವಕ.

ಅದೇ ನೀಲಿ - ಬಿಳಿ ಸಮವಸ್ತ್ರ, ಬಣ್ಣ ಕಳೆದುಕೊಂಡ ಗೋಡೆಗಳ ಶಾಲೆ, ರಗಳೆ ರಗಳೆ ಎಂದೆನಿಸಿಬಿಡುವ ಪಾಠ, ಅದೆಲ್ಲದ್ದಕ್ಕೆ ಸಾಥ್ ಕೊಡುವ ಜಿಟಿಪಿಟಿ ಮಳೆ ಎಲ್ಲವೂ ಅಗಸ್ಟ್ 15 ಬರುತ್ತಲೇ ಜೀವ ಪಡೆಯುತ್ತಿತ್ತು, ನಮ್ಮಲ್ಲೂ ಹೊಸ ಜೀವ ತುಂಬುತ್ತಿತ್ತು.

ಆದರೆ ಆಗಿದ್ದ ಕನಸುಗಳಲ್ಲಿ ಕೆಲವು ಇನ್ನೂ ಉಳಿದಿವೆ, ಇನ್ನೂ ಕೆಲವು ಅರೆಜೀವಾವಸ್ಥೆಯಲ್ಲಿದೆ, ಹಲವು ಸತ್ತಿವೆ. ಅದೇನೇ ಇರಲಿ.

ಹಳ್ಳಿಗಳಲ್ಲಿ ಇಂದಿಗೂ ಸ್ವಾತಂತ್ರ್ಯೋತ್ಸವ ಎಂದರೆ ಮಕ್ಕಳಿಗೆ ಹಬ್ಬ. ನನಗಂತೂ ಅದೊಂದು ಮಧುರ ಯಾತನೆ. ಆದರೆ ಆ ಧ್ವಜಕಂಬದ ಮೇಲೆ ತ್ರಿವರ್ಣ ಧ್ವಜ ಪಟಪಟ ಹಾರುವಾಗ ಕೊಡುತ್ತಿದ್ದ ಸೆಲ್ಯೂಟ್ ಅದೆಂತಹ ಜೋಷ್ ನನ್ನಲ್ಲಿ ಮತ್ತು ನನ್ನ ಗೆಳೆಯರಲ್ಲಿ ತರುತ್ತಿತ್ತು ಗೊತ್ತಾ ?

ಸ್ವಾತಂತ್ರ್ಯೋತ್ಸವದ ಆ ಪೂರ್ವಭಾವಿ ಸಿದ್ದತೆ......! ಇದರ ಬಗ್ಗೆ ನನ್ನಲ್ಲಿ ಸಾಕಷ್ಟು ನೆನಪುಗಳ ಒರತೆಯಿದೆ. ಸ್ವಾತಂತ್ರ್ಯೋತ್ಸವಕ್ಕೆ ಹದಿನೈದು ದಿನಗಳಿರುತ್ತಲೇ ನಮ್ಮ ತಯಾರಿ. ಮೇಷ್ಟ್ರು ನಮ್ಮನ್ನೆ ಬೇರೆ ಬೇರೆ ತಂಡಗಳಾಗಿ ಮಾಡುತ್ತಿದ್ದರು. ಪ್ರತಿ ತಂಡಕ್ಕೂ ಅದರದ್ದೆಯಾದ ಜವಾಬ್ದಾರಿಗಳು.

ಅದರೆಡೆಯಲ್ಲಿ ನೃತ್ಯ ತರಬೇತಿ, ಭಾಷಣಕ್ಕೆ ತಯಾರಿ, ಅಲಂಕಾರ ಹೀಗೆ ಏನೆಲ್ಲಾ ಕೆಲಸಗಳು. ಹಾರೋ ತ್ರಿವರ್ಣವನ್ನು ನೆನಪಿಸಿಕೊಳ್ಳವಾಗ ಆಗುತ್ತಿದ್ದ ರೋಮಾಂಚನದ ಮುಂದೆ ಈ ಕೆಲಸಗಳೆಲ್ಲ ಹೂವೆತ್ತಿದಷ್ಟು ಹಗುರವೆನಿಸಿಕೊಂಡು ಬಿಡುತ್ತಿದ್ದವು.

ಅಗಸ್ಟ್ 15ರಂದು ಭಾಷಣ ಮಾಡುವ ಹುರುಪು, ಗುರು ಹಿರಿಯರ ಸಲಹೆ- ಸೂಚನೆಗಳು, ಇನ್ನೂ ನೃತ್ಯಕ್ಕೆ ರೆಡಿಯಾಗಬೇಕು ಅನ್ನೊ ಅವಸರ, ಮತ್ತೆ ನಾಟಕಕ್ಕೆ ತಯಾರಿ, ಒಟ್ಟಿನಲ್ಲಿ ದಿನವಿಡಿ ನಮ್ಮ ಕಲರವ. ದಿನದ ಕೊನೆಗೆ ಮನೆಯ ಹಾದಿ ಹಿಡಿದಾಗ ನಮ್ಮಲ್ಲಿ ಉಳಿಯುತ್ತಿದ್ದದ್ದು ನಾವೂ ಈ ದೇಶಕ್ಕಾಗಿ ಏನನ್ನೊ ಮಾಡಿದ್ದೇವೆ ಎಂಬ ಧನ್ಯತಾ ಭಾವ.

ಇಂತಹ ಸ್ವಾತಂತ್ರ್ಯ ದಿನ ಕೆಲವರಿಗೆ ಬರೀ ರಜಾದಿನವಾಗಿ ಯಾಕೆ ಉಳಿಯುತ್ತದೆ. ಇದು ಪ್ರಬುದ್ಧತೆಯ ಸಂಕೇತವಾ? ಅಲ್ಲ ಉದಾಸೀನತೆಯೊ? ಈ ದೇಶಕ್ಕಾಗಿ ನಾವೇನು ಮಾಡಬಹುದು? ಏನು ಮಾಡಿದ್ದೇವೆ? ಯಾಕೆ ಏನನ್ನು ಮಾಡಲಾಗಿಲ್ಲ? ದೇಶ ನಿಜವಾಗಿಯೂ ಇಂದು ಯಾವ ಸ್ಥಿತಿಯಲ್ಲಿದೆ? ಇದಕ್ಕೇನು ಕಾರಣ? ಸ್ವಾತಂತ್ರ್ಯದ ನಂತರ ಭಾರತ ನಿರೀಕ್ಷಿತ ಅಭಿವೃದ್ಧಿ ಸಾಧಿಸಿದೆಯಾ? ಇಲ್ಲವಾ?

ಹೀಗೆ ನಮ್ಮ ಆತ್ಮ ವಿಮರ್ಷೆಯೊಂದಿಗೆ ದೇಶದ ಬಗ್ಗೆ ಒಂದು ಕ್ಷಣ ಯೋಚಿಸಲಾರದಷ್ಟೂ ನಾವ್ಯಕೆ ಸ್ವಾರ್ಥಿಗಳಾಗುತ್ತೇವೆ? ಪಕ್ಕದಲ್ಲೆಲ್ಲೊ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಾರದಷ್ಟೂ ನಾವ್ಯಕೆ ಬ್ಯೂಸಿ ಎಂದೆನಿಸಿಕೊಳ್ಳುತ್ತೇವೆ? ಈ ಎಲ್ಲಾ ಕಾರ್ಯಗಳನ್ನು ಮಾಡಲು ಹರಕು ಬಾಯಿಯ ರಾಜಕಾರಣೆಗಳಿಗೆ ಯಾಕೆ ಗುತ್ತಿಗೆ ಒಪ್ಪಿಸುತ್ತೇವೆ? ಮತ್ತು ನಾವು ಮಾಡದ, ಮಾಡಲಾರಾದ, ಮಾಡಲಾಗದ ಕೆಲಸಗಳನ್ನು ಅವರು ಮಾಡಲಿ, ಮಾಡಬಹುದು ಅಥವಾ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸುತ್ತೇವೆ ?

ಬಾಂಬ್ ಸ್ಫೋಟವಾದಾಗ ನನ್ನ ಸ್ನೇಹಿತರು ಚೆನ್ನಾಗಿದ್ದಾರಾ? ನನ್ನ ಮನೆಯವರಿಗೆ ಏನೂ ಆಗಿಲ್ಲ ತಾನೆ ? ಎಂಬ 'ನನ್ನತನ'ದ ಕೋಟೆಯನ್ನು ನಿರ್ಮಿಸಿಕೊಳ್ಳತ್ತೇವೆ. ನನ್ನ ತಾಯ್ನಾಡಿನ ಎದೆ ಛಿದ್ರಛಿದ್ರವಾಗುತ್ತಿದೆ. ಅದಕ್ಕೆ ರಕ್ತ ತರ್ಪಣವಾಗುತ್ತಿದೆ. ಇದನ್ನ ತಡೆಯಲು ನಾವೇನಾದರೂ ಮಾಡಬೇಕು ಎಂಬ ಅಲೆ ಯಾಕೆ ಸೃಷ್ಟಿಯಾಗುತ್ತಿಲ್ಲ? ಸಂಸತ್ತಿನಲ್ಲಿ ನೋಟಿನ ಧಾರೆ ಕಂಡಾಗ ಬಾಯಿಂದ ಉದುರುವ ಛಿ....ಥೂಗಳನ್ನು ಚುನಾವಣಾ ಸಂದರ್ಭದಲ್ಲಿ ನಾವ್ಯಕೆ ನುಂಗಿಕೊಳ್ಳುತ್ತೇವೆ? ಅಣು ಒಪ್ಪಂದ ದೇಶಕ್ಕೆ ಪೂರಕವೋ, ಮಾರಕವೋ ಎಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಯಾಕೆ ಒಂದು ಚಿಂತನಾ ಸಂಚಲನ ಉಂಟಾಗುವುದಿಲ್ಲ?

ಇಂತಹ ಹತ್ತಾರು ಪ್ರಶ್ನೆಗಳು ಇಂದು ನನ್ನಲ್ಲಿ ಹುಟ್ಟಿಕೊಳ್ಳುತ್ತವೆ. ಅವೆಲ್ಲವೂ ಮುಗ್ಧತೆಯ ಲೇಪ ಹೊಂದಿದ್ದ ಅಂದಿನ ಸ್ವಾತಂತ್ರ್ಯೋತ್ಸವದ ಸಡಗರವನ್ನು ಮರೆಸಿ ಬಿಡುತ್ತದೆ.

ಈಗ ನನ್ನೆಲ್ಲಾ ಭಾರತವಾಸಿಗಳಿಗೆ "ಛಿದ್ರವಾಗುವ ಮುನ್ನ ಭದ್ರವಾಗೋಣ" ಎಂದು ಕೂಗಿಕೂಗಿ ಹೇಳಬೆಕೆನಿಸುತ್ತದೆ. ನಮ್ಮ ದೇಶ 'ಹಾರೋ ಹಾದಿಯಲ್ಲಿ ರೆಕ್ಕೆ ಕಳೆದುಕೊಂಡ ಹಕ್ಕಿ'ಯಂತಾಗುವುದು ಬೇಡ ಎಂದು ಸಾರಿಸಾರಿ ಸಾರಬೇಕು ಎಂದೆನಿಸಿ ಬಿಡುತ್ತದೆ.

ಅಷ್ಟಕ್ಕೂ ಈಗ ಉಳಿದಿರುವುದು.... ಎಲ್ಲೋ ಬದಲಾವಣೆಯ ಗಾಳಿ ಬೀಸಬಹುದು ಅದು ದೇಶವ್ಯಾಪಿಯಾಗಿ ಹಬ್ಬಬಹುದು ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದ ಎಲ್ಲಾ ಮಹಾತ್ಮರ ಕಣ್ಣಲ್ಲಿ ಮಡುಗಟ್ಟಿದ್ದ ಮಾದರಿ ಭಾರತದ ಕನಸು ಈಡೇರಬಹುದು ಎಂಬ ನಿರೀಕ್ಷೆಯಷ್ಟೆ.

ಸ್ವಾತಂತ್ರ್ಯೋತ್ಸವ ಮರಳಿ ಮರಳಿ ಬರುತ್ತದೆ, ಆದರೆ ಆ ಬಾಲ್ಯ.............?