1940ರ ಮಾರ್ಚ್ 13, ಕಾಕ್ಸ್‌ಟೌನ್ ಹಾಲ್‌ನಲ್ಲಿ ಈಸ್ಟ್ ಇಂಡಿಯ ಒಕ್ಕೂಟ ಮತ್ತು ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿಯ ಜಂಟಿ ಸಭೆ ನಿಗದಿಯಾಗಿತ್ತು. ಮೈಕೆಲ್ ಒ ಡಯರ್ ಭಾಷಣಕಾರರಲ್ಲಿ ಒಬ್ಬರಾಗಿದ್ದರು. ಸಿಖ್ ಯುವಕನೊಬ್ಬ ಪುಸ್ತಕವೊಂದರಲ್ಲಿ ರಿವಾಲ್ವರ್ ಅಡಗಿಸಿಟ್ಟುಕೊಂಡು ಕಾಕ್ಸ್‌ಟೌನ್ ಹಾಲ್ ಪ್ರವೇಶಿಸಲು ಯಶಸ್ವಿಯಾಗಿದ್ದ. ಸಭೆ ನಡೆದ ಬಳಿಕ ಎಲ್ಲರೂ ಎದ್ದುನಿಂತರು. ಡಯರ್ ಲಾರ್ಡ್ ಜೆಟ್‌ಲ್ಯಾಂಡ್ ಜತೆ ಮಾತನಾಡಲು ವೇದಿಕೆ ಏರಿದರು.
ಸಿಖ್ ಯುವಕನ ಮನಸ್ಸಿನಲ್ಲಿ ದ್ವೇಷದ ಕಿಡಿ ಹೊತ್ತಿಉರಿಯುತ್ತಿತ್ತು. ಚಕ್ಕನೇ ರಿವಾಲ್ವರ್ ಹೊರತೆಗೆದು ಡಯರ್‌ನತ್ತ ಎರಡು ಬಾರಿ ಗುಂಡು ಹಾರಿಸಿದ. ಡಯರ್ ಪ್ರಾಣಪಕ್ಷಿ ಹಾರಿಹೋಗಿತ್ತು. ಅಷ್ಟಕ್ಕೆ ತೃಪ್ತನಾಗದ ಸಿಖ್ ಯುವಕ ಲಾರ್ಡ್ ಜೆಟ್‌ಲ್ಯಾಂಡ್, ಸರ್ ಲೂವಿಸ್ ಡೇನ್‌ರತ್ತ ಕೂಡ ಗುಂಡು ಹಾರಿಸಿದ. ಲೂಯಿಸ್ ಡೇನ್ ಪಕ್ಕೆಲುಬು ಮುರಿದು ತೀವ್ರ ಗಾಯಗಳಿಂದ ನೆಲದ ಮೇಲೆ ಬಿದ್ದರು. ಲಾರ್ಡ್ ಲ್ಯಾಮಿಂಗ್‌ಟನ್ ಅವರಿಗೆ ಕೂಡ ಗುಂಡೊಂದು ಬಡಿದು ಬಲಗೈ ಮುರಿಯಿತು. ಇಷ್ಟೆಲ್ಲ ಅನಾಹುತಕ್ಕೆ ಕಾರಣನಾದ ಸಿಖ್ ಯುವಕನ ಹೆಸರು ಉದಾಮ್ ಸಿಂಗ್! ಇಂಗ್ಲೆಂಡ್‌ಗೆ ಆಗಮಿಸಿದ್ದ ಅವನ ಉದ್ದೇಶ ಈಡೇರಿತ್ತು. ಸಂತೃಪ್ತಿಯ ಭಾವ ಮುಖದಲ್ಲಿತ್ತು. ಹೊಗೆಯಾಡಿದ್ದ ಸೇಡಿನ ಕಿಚ್ಚು ಆರಿಹೋಗಿತ್ತು.
ಫ್ಲ್ಯಾಶ್‌ಬ್ಯಾಕ್ ಮಹಾತ್ಮಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ್ಯದ ಕಹಳೆ ಭಾರತದಾದ್ಯಂತ ಮೊಳಗಿತು. ಬ್ರಿಟಿಷರ ವಸಾಹತುಶಾಹಿ ಆಡಳಿತದ ವಿರುದ್ಧ ಎಲ್ಲೆಲ್ಲೂ ಪ್ರತಿಭಟನೆಗಳು, ಸಭೆ, ಸಮಾರಂಭಗಳು ನಡೆದವು. ಬ್ರಿಟಿಷರೇ ದೇಶ ಬಿಟ್ಟು ತೊಲಗಿರಿ ಎಂಬ ಕೂಗು ಭಾರತವಿಡೀ ಮಾರ್ದನಿಸಿತು. 1919ರ ಏಪ್ರಿಲ್ 13ರಂದು ಅದೇ ತರದ ಸಭೆಯೊಂದು ನಡೆದಿತ್ತು. ಅಮೃತಸರದ ಜಲಿಯನ್‌ವಾಲಾಬಾಗ್‌ನಲ್ಲಿ ಸುಮಾರು 20 ಸಾವಿರ ಭಾರತೀಯರು ನೆರೆದಿದ್ದರು. ಅವರಲ್ಲಿ ಬಹುತೇಕ ಮಂದಿ ಸಿಖ್ ಸಮುದಾಯಕ್ಕೆ ಸೇರಿದವರು. ಬ್ರಿಟನ್ ವಸಾಹತುಶಾಹಿ ಆಡಳಿತ ವಿರುದ್ಧ ಜನತೆಯನ್ನು ಹುರಿದುಂಬಿಸಲು ಸ್ಥಳೀಯ ನಾಯಕರು ಸಜ್ಜಾಗಿದ್ದರು. ರೌಲಟ್ ಆಕ್ಟ್ ಕಾಯಿದೆಯಡಿಯಲ್ಲಿ ಡಾ.ಸತ್ಯಪಾಲ್, ಡಾ.ಸೈಫುದ್ದೀನ್ ಕಿಚ್‌ಲೆವ್ ಮತ್ತಿತರರ ಬಂಧನ ಮತ್ತು ಗಡಿಪಾರನ್ನು ಪ್ರತಿಭಟಿಸುವುದೂ ಅವರ ಉದ್ದೇಶವಾಗಿತ್ತು. ಉಧಾಂಸಿಂಗ್ ಮತ್ತವನ ಸಂಗಡಿಗರು ಬಿರುಬಿಸಿಲಿನ ಬೇಸಿಗೆಯ ಮಧ್ಯಾಹ್ನ ನೆರೆದಿದ್ದ ಗುಂಪಿನ ಬಾಯಾರಿಕೆ ತಣಿಸುತ್ತಿದ್ದರು. ಅಷ್ಟರಲ್ಲಿ ಎಲ್ಲಿಂದಲೋ ರೈಫಲ್‌ಗಳು ಮತ್ತು ಸಣ್ಣ ಕತ್ತಿಗಳಿಂದ ಸಜ್ಜಿತರಾದ 90 ಬ್ರಿಟಿಷ್ ಸೈನಿಕರ ಪಡೆ ಅಲ್ಲಿಗೆ ಮೆಷಿನ್ ಗನ್‌ಗಳಿಂದ ತುಂಬಿದ ಎರಡು ಕಾರುಗಳಲ್ಲಿ ಆಗಮಿಸಿತು. ಜಲಿಯನ್‌ವಾಲಾ ಬಾಗ್ ಕಿರಿದಾದ ಪ್ರವೇಶ ದ್ವಾರದಲ್ಲಿ ಸಂಜೆ 5.15ಕ್ಕೆ ಪಡೆಗಳು ಬಿರುಸಿನಿಂದ ಒಳಹೊಕ್ಕವು.
379 ಜನರ ಕಗ್ಗೊಲೆ ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡಯರ್ ಗೋಲಿಬಾರಿಗೆ ಆದೇಶ ನೀಡಿದ್ದೇ ತಡ ಕೋವಿಗಳಿಂದ ಗುಂಡುಗಳು ಚಿಮ್ಮಿದವು. ಜನರು ದಿಕ್ಕಾಪಾಲಾಗಿ ಓಡಿದರು. ಸುತ್ತಲೂ ಎರಡಾಳೆತ್ತರದ ಕಾಂಪೌಂಡ್. ಇಕ್ಕಟ್ಟಾದ ಪ್ರವೇಶದ್ವಾರದಲ್ಲಿ ಪೊಲೀಸರ ಕಣ್ಗಾವಲು. 15 ನಿಮಿಷಗಳವರೆಗೆ ಬಂದೂಕುಗಳ ಗುಂಡುಗಳು ಸಿಡಿದವು. ಉದ್ಯಾನವನದ ಗೋಡೆಯನ್ನು ಹತ್ತಲು ಕೆಲವರು ಪ್ರಯತ್ನಿಸಿದರು. ಇನ್ನೂ ಕೆಲವರು ಪಾರ್ಕಿನಲ್ಲಿದ್ದ ಬಾವಿಯೊಳಕ್ಕೆ ಜೀವವುಳಿಸಿಕೊಳ್ಳಲು ಧುಮುಕಿದರು. ಹಾರಿದ ಗುಂಡುಗಳಿಂದ ದಟ್ಟವಾದ ಹೊಗೆ ಆವರಿಸಿತು. ತುಪತುಪನೆ ಹೆಣಗಳು ಬೀಳತೊಡಗಿದವು. ನೆತ್ತರಿನ ಕೋಡಿಯೇ ಹರಿಯಿತು.ಅಧಿಕೃತ ಅಂಕಿಅಂಶಗಳ ಪ್ರಕಾರ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ 379 ಮತ್ತು ಗಾಯಗೊಂಡವರು 200 ಮಂದಿ. ಆದರೆ ಇತರೆ ವರದಿಗಳ ಪ್ರಕಾರ ಜೀವಕಳೆದುಕೊಂಡವರು 1000ಕ್ಕೂ ಹೆಚ್ಚು ಮಂದಿ. ರಾಜಕೀಯ ಕಾರಣಗಳಿಗಾಗಿ ಸತ್ತವರ ನಿಖರ ಸಂಖ್ಯೆಯನ್ನು ಬ್ರಿಟಿಷರು ಮುಚ್ಚಿಟ್ಟರು.
ಜಲಿಯನ್‌ವಾಲಾ ಭಾಗ್ ದುರ್ಘಟನೆ ಸಂಭವಿಸಿದಾಗ ಉದಾಂಸಿಂಗ್ 20 ವರ್ಷ ಪ್ರಾಯದ ಯುವಕನಾಗಿದ್ದ. ಬ್ರಿಟನ್ ವಸಾಹತುಶಾಹಿ, ದಬ್ಬಾಳಿಕೆಯ ಆಡಳಿತದ ವಿರುದ್ಧ ಸಡ್ಡುಹೊಡೆದ ಅನೇಕ ಮಂದಿ ಬಿಸಿರಕ್ತದ ಯುವಕರಲ್ಲಿ ಉದಾಂಸಿಂಗ್ ಕೂಡ ಒಬ್ಬನಾಗಿದ್ದ. ಈ ಯುವಕರ ನರನಾಡಿಗಳಲ್ಲಿ ದೇಶಾಭಿಮಾನ ಉಕ್ಕಿಹರಿಯುತ್ತಿತ್ತು, ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಿದಾಗಲೇ ದಾಸ್ಯದಿಂದ ಮುಕ್ತಿ ಎನ್ನುವ ಭಾವನೆ ಅವರಲ್ಲಿ ಮೊಳೆತಿತ್ತು. ಅದಕ್ಕಾಗಿ ಪ್ರಾಣತ್ಯಾಗಕ್ಕೂ ಅವರು ಸಿದ್ಧರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ತೀವ್ರವಾದಿ ಕ್ರಾಂತಿಕಾರಿಗಳಲ್ಲಿ ಸಿಂಗ್ ಕೂಡ ಒಬ್ಬನಾಗಿದ್ದ. ಭಗತ್ ಸಿಂಗ್, ಉದಾಂಸಿಂಗ್, ಚಂದ್ರಶೇಖರ ಆಜಾದ್, ಸುಖದೇವ್ ಮತ್ತು ರಾಜ್‌ಗುರು ಇವರೆಲ್ಲರೂ ಬೆಂಕಿಚೆಂಡಿನ ಸ್ವಾತಂತ್ರ್ಯ ವೀರರು ಎಂದೇ ಹೆಸರಾಗಿದ್ದರು. ಬ್ರಿಟಿಷರನ್ನು ತಾಯ್ನಾಡಿನಿಂದ ಬಲಪ್ರಯೋಗದಿಂದ ಅಟ್ಟಿದಾಗಲೇ ತಾಯ್ನಾಡಿಗೆ ಸ್ವಾತಂತ್ರ್ಯ, ಬ್ರಿಟಿಷರ ವಿರುದ್ಧ ಹಿಂಸಾಮಾರ್ಗದ ಮೂಲಕವೇ ಭಾರತಕ್ಕೆ ಮುಕ್ತಿ ಎನ್ನುವುದು ಈ ಯುವಕರ ಬಲವಾದ ನಂಬಿಕೆಯಾಗಿತ್ತು.
ಭಗತ್ ಸಿಂಗ್ ಭಗತ್ ಸಿಂಗ್ ಹೆಸರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ. ಭಗತ್ ಸಿಂಗ್ ಯೂರೋಪಿಯನ್ ಕ್ರಾಂತಿ ಚಳವಳಿಯನ್ನು ಅದ್ಯಯನ ಮಾಡಿ, ಸಮಾಜವಾದದ ಬಗ್ಗೆ ಪ್ರಭಾವಿತನಾಗಿದ್ದನು.ಭಾರತದಲ್ಲಿ ಕ್ರಾಂತಿಕಾರಿ ಆಂದೋಳನಕ್ಕೆ ಹೊಸ ದಿಕ್ಕನ್ನು ಭಗತ್ ಸಿಂಗ್ ನೀಡಿದ್ದ. ಅಂದಿನ ಕ್ರಾಂತಿಕಾರಿ ಯುವಕರು ಬ್ರಿಟನ್ ಸಾಮ್ರಾಜ್ಯವನ್ನು ನಾಶ ಮಾಡುವ ಒಂದೇ ಗುರಿ ಇಟ್ಟುಕೊಂಡಿದ್ದರೇ ಹೊರತು ರಾಜಕೀಯ ಪರ್ಯಾಯದ ಬಗ್ಗೆ ಚಿಂತಿಸಿರಲಿಲ್ಲ. ಇತಿಹಾಸದ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದ ಭಗತ್ ಸಿಂಗ್ ಕ್ರಾಂತಿಕಾರಿ ಆಂದೋಳನಕ್ಕೆ ಸ್ಪಷ್ಟ ರೂಪುರೇಷೆ ನೀಡಿದ.
ಜಲಿಯನ್‌ವಾಲಾ ಭಾಗ್ ದುರಂತ ಸಂಭವಿಸಿದಾಗ ಭಗತ್ ಸಿಂಗ್ 12 ವರ್ಷ ಪ್ರಾಯದ ಬಾಲಕ. ಈ ಹತ್ಯಾಕಾಂಡ ಭಗತ್ ಸಿಂಗ್ ಮನಸ್ಸಿನ ಮೇಲೆ ಆಳವಾದ ಗಾಯವುಂಟುಮಾಡಿತು. ಹತ್ಯಾಕಾಂಡ ನಡೆದ ಮರುದಿನವೇ ಜಲಿಯನ್‌ವಾಲಾ ಭಾಗ್‌ಗೆ ತೆರಳಿ ಅಲ್ಲಿನ ಮಣ್ಣನ್ನು ತಂದು ಸ್ಮಾರಕವಾಗಿ ತನ್ನ ಜೀವನಪೂರ್ತಿ ಇರಿಸಿಕೊಂಡ. ಈ ಹತ್ಯಾಕಾಂಡವು ಬ್ರಿಟಿಷರನ್ನು ಹೊರಗಟ್ಟುವ ಅವನ ಸಂಕಲ್ಪವನ್ನು ಗಟ್ಟಿಗೊಳಿಸಿತು.
ND
ಭಗತ್ ಸಿಂಗ್ ರೀತಿಯಲ್ಲಿ ಉದಾಂಸಿಂಗ್‌ನನ್ನು ಕೂಡ ಈ ದುರ್ಘಟನೆ ಆಳವಾಗಿ ಕಲಕಿತು. ಅದು ಅವನ ಜೀವನದ ತಿರುವಾಗಿ ಮಾರ್ಪಟ್ಟಿತು. ಪವಿತ್ರ ಸರೋವರದಲ್ಲಿ ಸ್ನಾನ ಮಾಡಿದ ಉದಾಂ ಸುವರ್ಣಮಂದಿರದ ಎದುರು ನಿಂತು ಮೌನವಾದ ಶಪಥವನ್ನು ತೊಟ್ಟ. ಹತ್ಯಾಕಾಂಡಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ. ಅವನ ನರನಾಡಿಗಳಲ್ಲಿ ಸೇಡಿನ ಜ್ವಾಲೆ ದಹಿಸುತ್ತಿತ್ತು. ತನ್ನ ಮನಸ್ಸಿನಲ್ಲಿ ಹುದುಗಿದ್ದ ಗುಪ್ತ ಯೋಜನೆಯನ್ನು ಸಾಧಿಸಲು ವಿವಿಧ ನಾಮಾಂಕಿತನಾಗಿ ರಾಷ್ಟ್ರದಿಂದ ರಾಷ್ಟ್ರಕ್ಕೆ ಸಂಚರಿಸಿದ. ಆಫ್ರಿಕಾ, ನೈರೋಬಿ, ಅಮೆರಿಕ ಎಲ್ಲ ಕಡೆ ಸಂಚರಿಸಿ ಸಾಗರೋತ್ತರದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಹುರಿದುಂಬಿಸಿದ. ಭಾರತಕ್ಕೆ ಹಿಂದಿರುಗುವಂತೆ ಭಗತ್ ಸಿಂಗ್‌ಗೆ ಆದೇಶ ಬಂದಿತು. ಅಮೆರಿಕದಿಂದ ಸುಮಾರು 25 ಸಂಗಡಿಗರು, ರಿವಾಲ್ವರ್ ಮತ್ತು ಮದ್ದುಗುಂಡುಗಳೊಂದಿಗೆ ಭಾರತಕ್ಕೆ ವಾಪಸಾದ.
1927ರ ಆಗಸ್ಟ್ 30ರಂದು ಉದಾಂಸಿಂಗ್‌ನನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಅಮೃತಸರದಲ್ಲಿ ಬಂಧಿಸಲಾಯಿತು. ಉದಾಂ ಸಿಂಗ್ ಕೋರ್ಟ್‌ನಲ್ಲಿ ಕೂಡ ಬ್ರಿಟನ್ ಸಾಮ್ರಾಜ್ಯವಾದಿಗಳ ಹಿಂಸಾತ್ಮಕ ಅಂತ್ಯವನ್ನು ಕಾಣಲು ಇಚ್ಛಿಸುವುದಾಗಿ ದಿಟ್ಟತನದಿಂದ ಹೇಳಿದ. ಅವನ ನಾಲ್ಕು ವರ್ಷ ಜೈಲುವಾಸದ ಅವಧಿಯಲ್ಲಿ ಭಾರತದ ಕ್ರಾಂತಿಕಾರಿ ಆಂದೋಳನ ಪರಾಕಾಷ್ಠೆಯ ಹಂತ ಮುಟ್ಟಿತು. ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಗಲ್ಲುಶಿಕ್ಷೆಗೆ ಗುರಿಯಾಗಿ ಹುತಾತ್ಮರಾದರು. ಉದಾಂಸಿಂಗ್‌ನನ್ನು 1931ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು.
1933ರಲ್ಲಿ ತನ್ನ ಸ್ವಗ್ರಾಮಕ್ಕೆ ಭೇಟಿ ಕೊಟ್ಟ ಅವನು, ಕಾಶ್ಮೀರಕ್ಕೆ ತೆರಳಿ ಅಲ್ಲಿ ಪೊಲೀಸರಿಗೆ ಕೈಕೊಟ್ಟು ಜರ್ಮನಿಗೆ ಪಲಾಯನ ಮಾಡಿದ. 1934ರಲ್ಲಿ ಕೊನೆಗೂ ಲಂಡನ್ ಮುಟ್ಟಿದ್ದ ಉದಾಂಸಿಂಗ್ ಕಮರ್ಷಿಯಲ್ ರಸ್ತೆಯಲ್ಲಿ ನಿವಾಸವೊಂದನ್ನು ಬಾಡಿಗೆಗೆ ಪಡೆದ. ಸಿಂಗ್‌ನ ಏಕೈಕ ಗುರಿ ಜನರಲ್ ಡಯರ್ ಹತ್ಯೆಮಾಡುವುದಾಗಿತ್ತು. ಈ ಉದ್ದೇಶಕ್ಕಾಗಿ 6 ಚೇಂಬರ್ ರಿವಾಲ್ವರ್ ಮತ್ತು ಗುಂಡುಗಳನ್ನು ಖರೀದಿಸಿದ.
ಜಲಿಯನ್‌ವಾಲಾ ಬಾಗ್ ಕಗ್ಗೊಲೆಯಾಗಿ ಸುಮಾರು 21 ವರ್ಷಗಳು ಗತಿಸಿದ ಬಳಿಕ 1940ರಂದು ಸಿಂಗ್‌ಗೆ ಸದವಕಾಶವೊಂದು ಸಿಕ್ಕಿತು. ಜಂಟಿ ಸಭೆಯೊಂದರಲ್ಲಿ ಡೈಯರ್‌ನ ಹತ್ಯೆ ಮಾಡುವ ಮೂಲಕ ತಾಯ್ನಾಡಿನ ಗೌರವ ಉಳಿಸಿದೆನೆಂಬ ಸಂತೃಪ್ತಿಯ ಭಾವನೆ ಅವನಲ್ಲಿ ಮೂಡಿತು. ತನ್ನ ದೇಶಕ್ಕಾಗಿ ಜೀವತೆತ್ತ ಹುತಾತ್ಮರ ಸಾಲಿಗೆ ಉದಾಂಸಿಂಗ್ ಸೇರಿಹೋದ.
ಜಲಿಯಾನಾವಾಲಾ ಭಾಗ್ ಘಟನೆಗೆ ಡಯರ್ ಪೂರ್ಣ ಜವಾಬ್ದಾರಿ ಎನ್ನುವುದನ್ನು ಮಾಧ್ಯಮಗಳು ನೆನಪಿಸಿಕೊಂಡವು. ಸಿಂಗ್ ಕೃತ್ಯವನ್ನು ದಮನಿತ ಜನರಿಂದ ಉಕ್ಕಿದ ಆಕ್ರೋಶ ಎಂದು ಬಣ್ಣಿಸಲಾಯಿತು. ಭಾರತೀಯರು 20 ವರ್ಷಗಳ ಬಳಿಕವೂ ತಮ್ಮ ಶತ್ರುವನ್ನು ಕ್ಷಮಿಸದೇ ಸದೆಬಡಿಯುತ್ತಾರೆಂದು ಜರ್ಮನ್ ರೇಡಿಯೋ ಪ್ರಸಾರ ಮಾಡಿತು.